ಬೆಂಗಳೂರು: ರಾಜ್ಯದಲ್ಲಿ ಡೆಂಘಿ ಪ್ರಕರಣಗಳು ಹೆಚ್ಚುತ್ತಿರುವುದು ಮತ್ತು ಸಾವಿನ ಸಂಖ್ಯೆಯ ಹೆಚ್ಚಳದ ಕುರಿತು ಹೈಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಡೆಂಘಿ ಪ್ರಕರಣ ಹೆಚ್ಚಳಕ್ಕೆ ಆತಂಕ ವ್ಯಕ್ತಪಡಿಸಿದೆ.
ರಾಯಚೂರು ಮೂಲದ ವ್ಯಕ್ತಿಯೊಬ್ಬರು ಪತ್ರಿಕೆಯೊಂದಕ್ಕೆ ಪತ್ರ ಬರೆದು, ಡೆಂಘಿ ಪ್ರಕರಣಗಳ ತಡೆಗೆ ಸರಕಾರ ತೆಗೆದುಕೊಂಡಿರುವ ಕ್ರಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ, ಸಾರ್ವಜನಿಕರ ಆರೋಗದ ದೃಷ್ಟಿಯಿಂದ ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕು ಎಂದು ಕೇಳಿಕೊಂಡಿದ್ದರು.
ಈ ಪತ್ರದ ಆಧಾರದಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುವ ನ್ಯಾಯಾಲಯ, ಪ್ರತಿಯೊಬ್ಬ ವ್ಯಕ್ತಿಗೂ ಬದುಕುವ ಹಕ್ಕಿದೆ. ಶುಭ್ರವಾದ ವಾತಾವರಣದಲ್ಲಿ ಬದುಕುವುದು, ಆರೋಗ್ಯವಂತ ಬದುಕು ಇವೆಲ್ಲವೂ ಮೂಲಭೂತ ಅಗತ್ಯತೆಗಳು. ಹೀಗಾಗಿ, ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಅಭಿಪ್ರಾಯಪಟ್ಟಿದೆ.
ಸರಕಾರಕ್ಕೆ ನೊಟೀಸ್: ಡೆಂಘಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರ ತೆಗೆದುಕೊಂಡಿರುವ ಕ್ರಮಗಳು ಮತ್ತು ಮುನ್ನೆಚ್ಚರಿಕೆಯ ಕುರಿತು ಸರಕಾರದಿಂದ ಹೈಕೋರ್ಟ್ ಮಾಹಿತಿ ಕೇಳಿದ್ದು, ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ತುರ್ತು ನೊಟೀಸ್ ನೀಡಿದೆ ಆ ಮೂಲಕ ಸರಕಾರವನ್ನು ಎಚ್ಚರಿಸುಚ ಕೆಲಸವನ್ನು ಹೈಕೋರ್ಟ್ ಮಾಡಿದೆ.
