ಬೆಂಗಳೂರು: ದೇವರಿದ್ದಾನಾ? ನಾಸ್ತಿಕರ ದಾಟಿಯಲ್ಲಿ ಒಂದೇ ಸಾಲಿನಲ್ಲಿ ಹೇಳುವುದಾರೆ ‘ದೇವರಿದ್ದಾನೆ ಎಂಬುದು ನಂಬಿಕೆಯಾದರೆ ದೇವರಿಲ್ಲ ಎಂಬುದು ಸತ್ಯ’. ಆದರೆ, ಆಸ್ತಿಕರ ನಂಬಿಕೆಯಲ್ಲಿ ಈ ಪ್ರಶ್ನೆಗೆ ಜಾಗವೇ ಇಲ್ಲ. ಉಳಿದವರ ಪಾಲಿಗೆ? ಮತ್ತದೇ ಗೊಂದಲ!
ಸರ್ವೇ ಒಂದರ ಪ್ರಕಾರ ಜಗತ್ತಿನ ಶೇ 16ಕ್ಕಿಂತ ಹೆಚ್ಚು ಮಂದಿ ಇದೀಗ ದೇವರ ಅಸ್ತಿತ್ವದಲ್ಲಿ ನಂಬಿಕೆ ಕಳೆದುಕೊಂಡಿದ್ದಾರೆ. ಇವರ ಪ್ರಕಾರ ದೇವರೇ ಇಲ್ಲ. ನೆರೆ ರಾಷ್ಟ್ರ ಚೀನಾ(67%) ಮೊದಲ ಸ್ಥಾನದಲ್ಲಿದ್ದರೆ ನಂತರದ ಸ್ಥಾನಗಳಲ್ಲಿ ಹಾಂಗ್ ಕಾಂಗ್(30%), ಜಪಾನ್(29%), ಸೌತ್ ಕೊರಿಯಾ(23%), ಫ್ರಾನ್ಸ್(21%), ಬೆಲ್ಜಿಯಂ(21%), ಸ್ವೀಡನ್(18%), ಸ್ಪೇನ್(16%), ಜರ್ಮನಿ(14%), ಆಸ್ಟ್ರೇಲಿಯಾ(13%), ನಾರ್ವೆ(12%), ಯುಕೆ(11%), ಅಮೆರಿಕಾ(7%) ದೇಶಗಳಿವೆ.
ಭಾರತೀಯರು ಕೂಡ ದೇವರಲ್ಲಿ ನಂಬಿಕೆ ಕಳೆದುಕೊಳ್ಳುತ್ತಿದ್ದು, ಶೇ.6ರಷ್ಟು ಜನ ದೇವರಿಲ್ಲ ಎಂಬ ನಿರ್ಣಯಕ್ಕೆ ಬಂದಿದ್ದಾರೆ. ಪಾಕಿಸ್ತಾನದಲ್ಲಿ ಭಾರತಕ್ಕಿಂತ ಒಂದು ಪರ್ಸೆಂಟ್ ಹೆಚ್ಚಿಗೆ ನಾಸ್ತಿಕರಿದ್ದಾರೆ ಮತ್ತು ನಾಸ್ತಿಕರ ಸಂಖ್ಯೆ ಜಾಗತಿಕವಾಗಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ ಎಂದು ವರ್ಲ್ಡ್ ಪಾಪ್ಯುಲೇಷನ್ ರಿವ್ಯೂ ಡಾಟ್ ಕಾಮ್ ಹೇಳುತ್ತದೆ.
ಹಾಗಿದ್ದರೆ ನಿಜಕ್ಕೂ ದೇವರಿಲ್ಲವಾ? ಇದ್ದಿದ್ದರೆ ಈವರೆಗೆ ಕಂಡಿಲ್ಲವೇಕೆ? ಇಲ್ಲದಿದ್ದರೆ ಜಗತ್ತು ಸೃಷ್ಟಿಯಾಗಿದ್ದು ಹೇಗೆ? ಪ್ರಶ್ನೆಗಳು ಹಾಗೆ ಉಳಿಯುತ್ತವೆ. ಇವುಗಳಾಚೆಗೆ ಪ್ರಸ್ತುತ ಕಾಲಘಟ್ಟದಲ್ಲಿ ಮತ್ತು ವಾಸ್ತವದಲ್ಲಿ ನೋಡುವುದಾದರೆ, ದೇವರು ಜಗತ್ತನ್ನು, ಜೀವ ಸಂಕುಲವನ್ನು ಸೃಷ್ಟಿಸಿದನಾ ಎಂಬುದಕ್ಕೆ ಸದ್ಯಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ನಂಬಬಹುದು ಅಷ್ಟೇ. ಆದರೆ, ಸದ್ಯ ನಮ್ಮ ನಡುವೆ ಇರುವ ‘ದೇವರು’ ಎಂಬ ಪರಿಕಲ್ಪನೆ ಮನುಷ್ಯನ ಸೃಷ್ಟಿ!
ಮನುಷ್ಯ ಜೀವಿ ಬೌದ್ಧಿಕ ವಿಕಸನಕ್ಕೆ ತೆರೆದುಕೊಳ್ಳಲು ಪ್ರಾರಂಭಿಸಿದಾಗ ಪ್ರಕೃತಿಯ ವೈಶಿಷ್ಟ್ಯತೆ ಮತ್ತು ವಿಸ್ಮಯಗಳು ಆತನನ್ನು ಚಕಿತಗೊಳಿಸಿದ್ದವು. ಭೀಕರ ಸಿಡಿಲು, ಪ್ರವಾಹ, ಭೂಕಂಪದಂತಹ ವಿಕೋಪಗಳು ಸೇರಿದಂತೆ ಪ್ರಕೃತಿಯ ವಿಸ್ಮಯಗಳನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಲು ಸಾಧ್ಯವಾಗದಿದ್ದಾಗ ಈ ಎಲ್ಲಾ ಅಚ್ಚರಿಗಳ ಹಿಂದೆ ಯಾವುದೋ ಅಗೋಚರ ಶಕ್ತಿ ಅಥವಾ ವ್ಯಕ್ತಿ ಇರಬಹುದು ಎಂದೇ ಭಾವಿಸಿದ. ಈ ಭಾವವನ್ನೇ ನಿಧಾನವಾಗಿ ನಂಬಲಾರಂಭಿಸಿದ.
ಕಾಲ ಗತಿಸಿದಂತೆ ಮನುಷ್ಯ ಮೃಗತ್ವ ಕಳಚಿಕೊಂಡು ನಾಗರೀಕತೆ ಕಡೆ ಹೆಜ್ಜೆ ಹಾಕಲು ಶುರುಮಾಡಿದ. ಒಳ್ಳೆಯದು ಮತ್ತು ಕೆಟ್ಟದ್ದು ನಿರ್ಣಯಿಸುವ ಮತ್ತು ಒಳ್ಳೆಯ ಸಂಗತಿಗಳನ್ನು ಆಚರಿಸುವ ಈ ನಾಗರಿಕತೆಗೆ ಎಲ್ಲಾ ಮನುಷ್ಯ ಜೀವಿಗಳೂ ತೆರೆದುಕೊಳ್ಳಲು ಸಿದ್ದರಿರಲಿಲ್ಲ. (ಇಂದಿಗೂ ಕೂಡ!) ಈ ವೇಳೆ ಅಂತಹ ಜನರನ್ನು ಸರಿದಾರಿಗೆ ತರಲು ಕೆಲ ಬುದ್ಧಿವಂತ ಸಮಾಜ ಸುಧಾರಕರು ದೇವರೆಂಬ ಪರಿಕಲ್ಪನೆಯನ್ನು ತಮ್ಮದೇ ರೀತಿಯಲ್ಲಿ ಜಾರಿಗೊಳಿಸಲು ಮುಂದಾದರು. ಈ ಕಾರ್ಯ ಜಗತ್ತಿನ ಎಲ್ಲ ನಾಗರಿಕ ಸಮಾಜಗಳಲ್ಲಿಯೂ ನಡೆದಿದೆ.
ದೇವರೆಂಬ ಪರಿಕಲ್ಪನೆಯನ್ನು ಜಾರಿ ಮಾಡಿದರೆ ಮಾತ್ರವೇ ಒಂದು ಸಮಾಜವನ್ನು ನಾಗರಿಕತೆ ಹಾದಿಯಲ್ಲಿ ಮುನ್ನಡೆಸಬಹುದು ಎಂಬುದು ಸಮಾಜ ಸುಧಾರಣೆ ಬಯಸಿದವರ ಲೆಕ್ಕಾಚಾರವಾಗಿತ್ತು. ಇದರ ಪರಿಣಾಮವಾಗಿ ದೇವರು, ಪಾಪ, ಪುಣ್ಯ, ಸ್ವರ್ಗ, ನರಕ ಪರಿಕಲ್ಪನೆಗಳು ಮತ್ತು ಪುರಾಣಗಳು ಕೂಡ ಸೃಷ್ಟಿಯಾದವು. ಕಾಲಾಂತರದಲ್ಲಿ ಸಮಾಜ ಸುಧಾರಕರಾಗಿ ಬಂದ ವ್ಯಕ್ತಿಗಳು ತಮ್ಮನ್ನು ತಾವು ದೇವದೂತರೆಂದು ಕರೆದುಕೊಂಡರು.
ಒಬ್ಬ ಸಾಧಾರಣ ವ್ಯಕ್ತಿ ಹೇಳುವ ಮಾತುಗಳಿಗೆ ಜನಮನ್ನಣೆ ಇರುವುದಿಲ್ಲ ಎಂಬುದು ಅವರಿಗೂ ತಿಳಿದಿತ್ತು. ಹೀಗಾಗಿಯೇ, ದೇವರು ಹೀಗೆ ಹೇಳಿ ಕಳುಹಿಸಿದ್ದಾನೆ. ನೀವಿದನ್ನು ಪಾಲಿಸಬೇಕು ಎಂದು ಸಮಾಜಕ್ಕೆ ಕಟ್ಟುಪಾಡುಗಳನ್ನು ಹಾಕಿಕೊಟ್ಟರು. ವಾಸ್ತವವಾಗಿ ಇವರಿಗೆ ಜನರನ್ನು ವಂಚಿಸುವ ಉದ್ದೇಶ ಇರಲಿಲ್ಲ. ಆದರೆ ತಾವು ದೇವದೂತರು ಎಂದು ಹೇಳಿಕೊಂಡರೆ ಮಾತ್ರ ಜನ ತಮ್ಮ ಮಾತು ಪಾಲಿಸುತ್ತಾರೆ ಹಾಗೂ ಸಮಾಜ ಸುಧಾರಣೆ ಹೆಚ್ಚು ಪರಿಣಾಮಕಾರಿ ಆಗಬಲ್ಲದು ಎಂದು ನಂಬಿದ್ದರು.
ಕೆಲವು ನಾಗರಿಕ ಸಮಾಜಗಳ ಸುಧಾರಕರು ಜನರಲ್ಲಿ ದೇವರ ನಂಬಿಕೆ ಮತ್ತಷ್ಟು ಬಲಗೊಳಿಸಲು ದೇವರನ್ನು ಮೂರ್ತ ರೂಪದಲ್ಲಿ ಸೃಷ್ಟಿಸಿದರು. ಆಯಾ ನಾಗರಿಕ ಸಮಾಜಗಳಲ್ಲಿ ವಿಧಿಸಿದ ಕಟ್ಟುಪಾಡುಗಳೇ ಲಿಖಿತ ರೂಪ ಪಡೆದುಕೊಂಡು ಧರ್ಮ ಗ್ರಂಥಗಳಾದವು. ಈ ಧರ್ಮ ಗ್ರಂಥಗಳನ್ನು ಪರಿಣಾಮಕಾರಿ ಮಾಡಲು ಅವುಗಳಲ್ಲಿಯೂ ದೇವರ ಉಲ್ಲೇಖ ಪ್ರಧಾನವಾಯಿತು. ಇವೆಲ್ಲವೂ ಜಗತ್ತಿನಾದ್ಯಂತ ದೇವರ ನಂಬಿಕೆ ಬಲವಾಗಲು ಪ್ರಮುಖ ಕಾರಣಗಳಾದವು. ಜತೆಗೇ ದೇವರ ಆರಾಧನಾ ಕೇಂದ್ರಗಳೂ ಪ್ರಾರಂಭವಾದವು.
ಇವೆಲ್ಲದರ ಆಚೆಗೂ ಬ್ರಹ್ಮಾಂಡವನ್ನು (ಕಾಸ್ಮೋಸ್) ಈವರೆಗೆ ವಿಜ್ಞಾನಕ್ಕೂ ಸಮರ್ಥವಾಗಿ ವಿವರಿಸಲು ಸಾಧ್ಯವಾಗಿಲ್ಲ. ಇದು ದೇವರು ಇರಬಹುದು ಎಂಬ ಆಸ್ತಿಕರ ನಂಬಿಕೆಯನ್ನು ಬಲಗೊಳಿಸಿದರೆ, ಮತ್ತೊಂದೆಡೆ ದೇವರಿದ್ದಾನೋ ಇಲ್ಲವೋ ಎಂಬ ಜಿಜ್ಞಾಸೆಯಲ್ಲಿರುವ ಜನರ ಅನುಮಾನಗಳನ್ನು ಹಾಗೇ ಉಳಿಸಿಟ್ಟಿದೆ. ಇದರ ಹೊರತಾಗಿ ನಮ್ಮ ನಡುವೆ ಇರುವ ಬಹುಸಂಖ್ಯಾತರು ಬದುಕಿನ ಬಗೆಗಿನ ಅನಿಶ್ಚಿತತೆ ಮತ್ತು ಭಯದ ಕಾರಣಕ್ಕೆ ದೇವರ ಮೇಲಿನ ನಂಬಿಕೆಯನ್ನು ಉಳಿಸಿಟ್ಟುಕೊಂಡಿದ್ದಾರೆ.
ದೇವರ ಅಸ್ತಿತ್ವದ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಮುಂದಾದ ಆಧ್ಯಾತ್ಮ ಚಿಂತಕರಲ್ಲಿ ಕೆಲವರು ವಿಶ್ವಶಕ್ತಿಯನ್ನು ‘ದೇವರು’ ಎಂದು ಕರೆದರು ಮತ್ತು ಈ ಶಕ್ತಿಯನ್ನು ಯಾವುದೇ ರೂಪದಲ್ಲಿ ಬೇಕಿದ್ದರೂ ಆರಾಧಿಸಬಹುದು ಎಂದರು. ಅದರಂತೆ ಮೂರ್ತರೂಪದ ‘ದೇವರು’ಗಳ ಆರಾಧನೆ ಜನಪ್ರಿಯವಾಯಿತು, ಜತೆಗೆ ಮತ್ತಷ್ಟು ಪ್ರವರ್ಧಮಾನಕ್ಕೆ ಬಂದಿತು. ಈ ವಿಶ್ವಶಕ್ತಿ ಆಸ್ತಿಕರ ಪಾಲಿಗೆ ದೇವರಾದರೆ, ನಾಸ್ತಿಕರ ದೃಷ್ಟಿಯಲ್ಲಿ ಬರೀ ಯೂನಿವರ್ಸಲ್ ಎನರ್ಜಿ ಹಾಗು ಈ ಶಕ್ತಿ ಬಿಗ್ ಬ್ಯಾಂಗ್ ನಿಂದ ಸೃಷ್ಟಿಯಾದದ್ದು.
ದೇವರಿದ್ದಾನೆ ಅಥವಾ ಇಲ್ಲ ಎಂಬುದನ್ನು ನಂಬುವ ಮುನ್ನ ಕೆಲವೊಂದು ವಿಚಾರಗಳನ್ನು ಜನ ಅರ್ಥೈಸಿಕೊಳ್ಳುವ ಅಗತ್ಯವಿದೆ. ಮನುಷ್ಯನ ಮೃಗತ್ವಕ್ಕೆ ಕಡಿವಾಣ ಹಾಕಲು ಮತ್ತು ಸಮಾಜ ಸುಧಾರಣೆಗಾಗಿ ದೇವರು ಮತ್ತು ಧರ್ಮಗಳು ಅಸ್ತಿತ್ವಕ್ಕೆ ಬಂದವೇ ವಿನಃ ಬೇರೆ ಕಾರಣಕ್ಕಾಗಿ ಅಲ್ಲ. ಆದರೆ ಇಂದು ಅವುಗಳ ಉದ್ದೇಶವೇ ಹಾದಿ ತಪ್ಪಿದೆ. ಸಮಾಜ ಸುಧಾರಣೆಗಾಗಿ ಅಂದೆಂದೋ ರೂಪಿಸಿದ ಧಾರ್ಮಿಕ ನಿಯಮಗಳು ಇದೀಗ ದುರ್ಬಳಕೆ ಆಗುತ್ತಿವೆ ಮತ್ತು ಪರಿಷ್ಕರಣೆಯಾಗದೆ ನರಳುತ್ತಿವೆ. ಎಲ್ಲಾ ಧರ್ಮಗಳಲ್ಲೂ ಪುರೋಹಿತಶಾಹಿ ವರ್ಗಗಳು ಸೃಷ್ಟಿಯಾಗಿವೆ. ಇವರ ಅನುಕೂಲಕ್ಕೆ ತಕ್ಕಂತೆ ದೇವರು ಮತ್ತು ಧರ್ಮವನ್ನು ಚಿತ್ರಿಸುತ್ತಿದ್ದಾರೆ. ಆಧ್ಯಾತ್ಮ ಚಿಂತಕರು ಹಾಗು ಸಮಾಜ ಸುಧಾರಕರನ್ನೇ ದೇವರ ಪಟ್ಟದಲ್ಲಿ ಕೂರಿಸಿ ಮುಗ್ದ ಜನರನ್ನು, ಸಮಾಜವನ್ನೂ ವಂಚಿಸುತ್ತಿದ್ದಾರೆ. ಕೆಲವರಂತೂ ತಾವೇ ದೇವರೆಂದು ಘೋಷಿಸಿಕೊಂಡಿದ್ದಾರೆ.
ಮನುಷ್ಯನಿಗೆ ನಾಗರಿಕನಾಗಿ ಬದುಕಲು ಮತ್ತು ಮಾನವೀಯತೆ ಆಚರಿಸಲು ದೇವರು-ಧರ್ಮ ಅನಿವಾರ್ಯವಲ್ಲ. ದೇವರನ್ನು ನಂಬಬೇಕು ಎಂದೇನೂ ಇಲ್ಲ. ಇದೇ ವೇಳೆ ಮೌಢ್ಯಗಳನ್ನು ಕೈಬಿಟ್ಟು, ಸದ್ವಿಚಾರಗಳನ್ನು ಮತ್ತು ಅವುಗಳನ್ನು ಹೇಳಿದವರನ್ನು ಅಥವಾ ವಿಶ್ವಶಕ್ತಿಯನ್ನು ಅವರವರ ನಂಬಿಕೆಗೆ ಅನುಸಾರ ಆರಾಧಿಸುವುದು ಅಸಂಗತವಲ್ಲ.
ಲೇಖನ: ಮಂಜೇಗೌಡ ಕೆ.ಜಿ., ವಕೀಲರು. 9980178111