ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆ ಮತ್ತಷ್ಟು ಚುರುಕು ಪಡೆದುಕೊಂಡಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಕಟ್ಟೆಚ್ಚರ ಮುಂದುವರಿದಿದೆ.
ಇಂದಿನಿಂದ ಐದು ದಿನಗಳ ಕಾಲ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನಾಳೆ ಮತ್ತು ನಾಡಿದ್ದು ರೆಡ್ ಅಲರ್ಟ್ ಇದ್ದರೆ, ಜುಲೈ 15 ಮತ್ತು 16 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಉಳಿದಂತೆ ಉತ್ತರ ಕರ್ನಾಟಕದಲ್ಲಿ ಕೂಡ ಮಳೆಯ ಆರ್ಭಟ ಮುಂದುವರಿಯುವ ಮುನ್ಸೂಚನೆ ಇದ್ದು, ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿಗೆ ಐದು ದಿನ ಯೆಲ್ಲೋ ಅಲರ್ಟ್ ಇದ್ದರೆ, ಕಲಬುರಗಿ ಜಿಲ್ಲೆಗೆ ಇಂದು ಮತ್ತು ಜುಲೈ 14, 15 ರಂದು, ರಾಯಚೂರು, ವಿಜಯಪುರ ಜಿಲ್ಲೆಗಳಿಗೆ ಜುಲೈ 14 ಮತ್ತು 15 ಕ್ಕೆ, ಯಾದಗಿರಿ ಜಿಲ್ಲೆಗೆ ಇಂದು ಮತ್ತು ಜುಲೈ 14 ರಂದು, ಬಾಗಲಕೋಟೆ, ಬೀದರ್ ಜಿಲ್ಲೆಗಳಿಗೆ ಜುಲೈ 15 ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಮಲೆನಾಡು ಭಾಗದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಇಂದು ಯೆಲ್ಲೋ ಮತ್ತು ಮುಂದಿನ ನಾಲ್ಕು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಾಸನ ಜಿಲ್ಲೆಗೆ ಜುಲೈ 14, 16 ರಂದು ಯೆಲ್ಲೋ ಮತ್ತು ಜುಲೈ 15 ಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ.
ಮೈಸೂರು ಜಿಲ್ಲೆಗೆ ಜುಲೈ 14, 15 ರಂದು ಯೆಲ್ಲೋ, ದಾವಣಗೆರೆ ಜಿಲ್ಲೆಗೆ ಜುಲೈ 15 ಮತ್ತು 16 ರಂದು, ಚಿತ್ರದುರ್ಗ ಜಿಲ್ಲೆಗೆ 14ಕ್ಕೆ, ತುಮಕೂರು, ವಿಜಯನಗರ ಜಿಲ್ಲೆಗೆ ಜುಲೈ 15 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೆಲ ಸ್ಥಳಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಭಾರಿ ಮಳೆಯಾಗಲಿದೆ. ಬೆಳಗಾವಿ, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ನಿರಂತರ ಗಾಳಿ ಇರಲಿದೆ. ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳ ಕೆಲ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರು ನಗರ ಮತ್ತು ಸುತ್ತಮುತ್ತ ಮುಂದಿನ 48 ಗಂಟೆಗಳ ಕಾಲ ಮೋಡ ಕವಿದ ಆಕಾಶ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗಲಿದೆ.
