ಬೆಂಗಳೂರು: ರಾಜ್ಯದಲ್ಲಿ ಅಪಾಯಕಾರಿ ಡೆಂಗ್ಯು ಜ್ವರ ತನ್ನ ವ್ಯಾಪ್ತಿಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಿದೆ. ಕಳೆದ 24 ಗಂಟೆಯ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 159 ಜನರಿಗೆ ಡೆಂಗ್ಯು ಜ್ವರ ಕಾಣಿಸಿಕೊಂಡಿದೆ. ಈ ಪೈಕಿ ಬೆಂಗಳೂರಿನಲ್ಲೇ ಬರೋಬ್ಬರಿ 80 ಮಂದಿಗೆ ಡೆಂಗ್ಯು ಜ್ವರ ಬಂದಿದೆ.
ರಾಜ್ಯದಲ್ಲಿ ಈವರೆಗೆ ಒಟ್ಟು 7 ಜನರು ಡೆಂಗ್ಯು ಜ್ವರದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಆದಾಗ್ಯೂ ರಾಜ್ಯದಲ್ಲಿ ಈವರೆಗೆ ಒಟ್ಟಾರೆ 301 ಮಂದಿ ಡೆಂಗ್ಯು ಜ್ವರದಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಬ್ಬೆದ್ದು ನಾರುತ್ತಿರುವ ಕೆ.ಆರ್.ಮಾರ್ಕೆಟ್!: ಹೌದು, ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಸ್ವಚ್ಛತೆಯಿಲ್ಲದೆ ಗಬ್ಬೆದ್ದು ನಾರುತ್ತಿದೆ. ಅದರಲ್ಲೂ ಕೆ.ಆರ್.ಮಾರ್ಕೆಟ್ ನ ಹೆಬ್ಬಾಗಿಲು ಕನಿಷ್ಠ ಸ್ವಚ್ಛತೆಯಿಲ್ಲದೆ ಗಬ್ಬೆದ್ದು ಕೊಳೆತು ನಾರುತ್ತಿದೆ. ಪರಿಣಾಮ ಪಕ್ಕದಲ್ಲೇ ಇರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಡೆಂಗ್ಯು ಜ್ವರ ಬರುವ ಭೀತಿ ಸೃಷ್ಟಿಯಾಗಿದೆ.
ಆದರೆ ಈ ಬಗ್ಗೆ ಸನಿಹದಲ್ಲೇ ಬಿಬಿಎಂಪಿ ಮುಖ್ಯ ಕಚೇರಿ ಮತ್ತು ಒಂದು ಕಿಲೋಮೀಟರ್ ದೂರದಲ್ಲಿರುವ ವಿಧಾನಸೌಧ ಇದ್ದರೂ ರಾಜ್ಯ ಸರ್ಕಾರವಾಗಲಿ, ಬಿಬಿಎಂಪಿಯಾಗಲಿ ಡೆಂಗ್ಯು ಜ್ವರದ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಯಾವುದೇ ಪ್ರಯತ್ನ ನಡೆಸಿಲ್ಲ.