ಬೆಂಗಳೂರು: ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಜನ್ಮದಂದೇ ಅವರ ಬಹುನಿರೀಕ್ಷೆಯ ಬೈರತಿ ರಣಗಲ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಸಖತ್ ವೈರಲ್ ಆಗಿದೆ. ಇದರಿಂದ ಅಭಿಮಾನಿಗಳು ಹುಚ್ಚೆದ್ದು ಕುಣಿದಾಡಿದ್ದಾರೆ.
ಶಿವರಾಜ್ ಕುಮಾರ್ ಅಭಿನಯದ ಹಾಗೂ ನರ್ತನ್ ನಿರ್ದೇಶನದ ಭೈರತಿ ರಣಗಲ್ ಚಿತ್ರದ ಆಫೀಶಿಯಲ್ ಟೀಸರ್‌ನಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ ಅಬ್ಬರಿಸಿದ್ದಾರೆ. ಟೀಸರ್ ಅದ್ದೂರಿಯಾಗಿ ಮೂಡಿ ಬಂದಿದ್ದು ಶಿವರಾಜ್ ಕುಮಾರ್ ಎರಡೂ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಭೈರತಿ ರಣಗಲ್ ಚಿತ್ರದ ಬಿಡುಗಡೆ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.
ನಾನು ತಾಳ್ಮೆ ಕಳೆದುಕೊಂಡಾಗ್ಲೆಲ್ಲ, ತುಂಬಾ ಜನ ತಲೆ ಕಳ್ಕೊಂಡಿದ್ದಾರೆ ಅನ್ನೋ ಮಾಸ್ ಡೈಲಾಗ್ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸಿದೆ. ಭೈರತಿ ರಣಗಲ್ ಮಫ್ತಿ ಸಿನಿಮಾದ ಪ್ರೀಕ್ವೆಲ್ ಆಗಿದ್ದು, ನರ್ತನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ರುಕ್ಮಿಣಿ ವಸಂತ, ರಾಹುಲ್ ಬೋಸ್, ಅವಿನಾಷ್, ದೇವರಾಜ್, ಮಧು ಗುರುಸ್ವಾಮಿ, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ ಅಭಿನಯಿಸುತ್ತಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ ನಿರ್ವಹಿಸುತ್ತಿದ್ದು, ರವಿ ಬಸ್ರೂರು ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ, ಗೀತಾ ಶಿವ ರಾಜಕುಮಾರ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ವೇದ ಸಿನಿಮಾ ಯಶಸ್ಸಿನ ಬಳಿಕ ಗೀತಾ ಪಿಕ್ಚರ್ಸ್ ನಿರ್ಮಿಸುತ್ತಿರುವ ಎರಡನೇ ಸಿನಿಮಾವಿದು. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಭೈರತಿ ರಣಗಲ್ ಚಿತ್ರ ಸೆಪ್ಟೆಂಬರ್ ತಿಂಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗಲಿದೆ. ಇದರ ಜೊತೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಹಾಗೂ ಎಂ ರಮೇಶ್ ರೆಡ್ಡಿ ನಿರ್ಮಾಣದ ೪೫ನೇ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ.
