ರಾಜಕೀಯ ಸುದ್ದಿ

ಮೋದಿಯವರೇ ಚುನಾವಣೆ ಟೈಮಲ್ಲಿ ಬಿಟ್ರೆ ಬೇರೆ ಟೈಮಲ್ಲಿ ಕರ್ನಾಟಕ ನೆನಪಾಗಲ್ವಾ? ಸಿ.ಎಂ ಪ್ರಶ್ನೆ

Share It

ಪ್ರವಾಹ ಬಂದಾಗಲೂ ಬರಲಿಲ್ಲ, ಬರಗಾಲ ಬಂದಾಗಲೂ ಬರಲಿಲ್ಲ: ಚುನಾವಣೆ ಬಂತು ಓಡಿ ಬಂದ್ರಿ. ಸುಳ್ಳು ಹೇಳಿ ಹೋದ್ರಿ

ಬಾಂಡ್ ಗಳ ಮೂಲಕ ಸಂಗ್ರಹಿಸಿದ 7600 ಕೋಟಿಗೆ ನೀವು ತೆರಿಗೆ ಕಟ್ಟಿಲ್ಲ? ಇದು ಕ್ರೈಂ ಅಲ್ವೇ? ಈ ಕ್ರೈಂನ ಹೊಣೆ ಹೊರುವವರು ಯಾರು?: ಉತ್ತರ ಕೊಡಿ ಮೋದಿಯವರೇ: ಸಿ.ಎಂ.ಆಗ್ರಹ

ಮೈಸೂರು : ಮೋದಿಯವರೇ ಚುನಾವಣೆ ಟೈಮಲ್ಲಿ ಬಿಟ್ರೆ ಬೇರೆ ಟೈಮಲ್ಲಿ ಕರ್ನಾಟಕ ನೆನಪಾಗಲ್ವಾ ನಿಮಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾರವಾಗಿ ಪ್ರಶ್ನಿಸಿದರು.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಎನ್.ಆರ್.ಮೊಹಲ್ಲಾದಲ್ಲಿ ನಡೆದ ‘ಪ್ರಜಾಧ್ವನಿ-2’ ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯಕ್ಕೆ ಪ್ರವಾಹ ಬಂದಾಗಲೂ ಬರಲಿಲ್ಲ, ಬರಗಾಲ ಬಂದಾಗಲೂ ಬರಲಿಲ್ಲ. ಚುನಾವಣೆ ಬಂತು ಓಡಿ ಬಂದ್ರಿ. ಸುಳ್ಳು ಹೇಳಿ ಹೋದ್ರಿ. ಯಾವ‌ ಮುಖ ಹೊತ್ತುಕೊಂಡು ರಾಜ್ಯಕ್ಕೆ ಬಂದ್ರಿ? ಇಷ್ಟೊಂದು ಸುಳ್ಳು ಹೇಳೋಕೇ ಬಂದ್ರಾ ಇಲ್ಲಿಗೆ ಎಂದು ಪ್ರಶ್ನಿಸಿದರು.

ಬಾಂಡ್ ಗಳ ಮೂಲಕ ಸಂಗ್ರಹಿಸಿದ 7600 ಕೋಟಿಗೆ ನೀವು ತೆರಿಗೆ ಕಟ್ಟಿಲ್ಲ? ಇದು ಕ್ರೈಂ ಅಲ್ವೇ? ಈ ಕ್ರೈಂನ ಹೊಣೆ ಹೊರುವವರು ಯಾರು? ಉತ್ತರ ಕೊಡಿ ಮೋದಿಯವರೇ ಎಂದು ಸಿ.ಎಂ.ಆಗ್ರಹಿಸಿದರು. ನಮ್ಮ ರಾಜ್ಯದ ಜನ ಬರಗಾಲದಲ್ಲಿ ಬೆಂದಿದ್ದಾರೆ. ನಮ್ಮ ರೈತರು ಕಷ್ಟದಲ್ಲಿದ್ದಾರೆ. ನಮ್ಮ ಪಾಲಿನ ಹಣ ಕೊಡಿ ಎಂದು ಕೇಳಿಕೊಂಡಿದ್ದೆವು. ನಾನೇ ಬಂದು ನಿಮ್ಮನ್ನು ಮತ್ತು ಅಮಿತ್ ಶಾ ಇಬ್ಬರನ್ನೂ ಭೇಟಿ ಮಾಡಿ ಮನವಿ ಕೊಟ್ಟಿದ್ದೆನ್ನೆಲ್ಲಾ, ಇವತ್ತಿನವರೆಗೂ ಒಂದೇ ಒಂದು ರೂಪಾಯಿಯನ್ನೂ ರಾಜ್ಯಕ್ಜೆ ಕೊಡಲಿಲ್ಲವಲ್ಲಾ? ಯಾವ ಮುಖ ಹೊತ್ತುಕೊಂಡು ರಾಜ್ಯಕ್ಕೆ ಬಂದು ಮತ ಕೇಳ್ತಾ ಇದೀರಿ ಎಂದು ಖಾರವಾಗಿ ಪ್ರಶ್ನಿಸಿದರು.

ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸ್ವತಂತ್ರ ಭಾರತದಲ್ಲಿ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿ ಯಾರೂ ಬಂದಿಲ್ಲ. ಅಪರೂಪಕ್ಕಾದರೂ ಸತ್ಯ ಹೇಳಿ ಎಂದು ವ್ಯಂಗ್ಯವಾಡಿದರು. 40% ಸರ್ಕಾರ ಅಂತ ಗುತ್ತಿಗೆದಾರರಿಂದಲೇ ಕರೆಸಿಕೊಂಡ ಏಕೈಕ ಸರ್ಕಾರ ನಿಮ್ಮ ಬಿಜೆಪಿ ಸರ್ಕಾರ. ಈಗ ನಾವು ನಾಗಮೋಹನ್ ದಾಸ್ ನೇತೃತ್ವದಲ್ಲಿ ಇರುವ ತನಿಖಾ ಆಯೋಗ ರಚನೆಯಾಗಿದೆ. ನಮ್ಮ ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿದ್ದರೆ ತೋರಿಸಿ, ದಾಖಲೆ ತಂದು ಒಪ್ಪಿಸಿ ಎಂದು ಸವಾಲು ಹಾಕಿದರು.

ಹತ್ತತ್ತು ವರ್ಷ ಪ್ರಧಾನಿ ಆಗಿ ಈ ದೇಶದ ರೈತರು, ಕಾರ್ಮಿಕರು, ಮಹಿಳೆಯರು, ಬಡವರ ಪರವಾಗಿ ಒಂದೇ ಒಂದು ಕಾರ್ಯಕ್ರಮ ಮಾಡಿದ್ದರೆ ತೋರಿಸಿ. ವಿದೇಶದಿಂದ ಕಪ್ಪು ಹಣ ತಂದು ಭಾರತೀಯರ ಖಾತೆಗೆ 15 ಲಕ್ಷ ಹಾಕ್ತೀನಿ ಅಂದ್ರಲ್ಲಾ 15 ರೂಪಾಯಿನಾದ್ರೂ ಹಾಕಿದ್ರಾ ಎಂದು ಪ್ರಶ್ನಿಸಿದರು.


Share It

You cannot copy content of this page