ಮಂಡ್ಯ: ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಗಂಡನನ್ನು ಆತನ ಹೆಂಡತಿ ಗಂಡನ ಪ್ರಿಯತಮೆಗೆ 5 ಲಕ್ಷ ರೂಪಾಯಿಗೆ ಮಾರಿದ ವಿಚಿತ್ರ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ಹಿನ್ನೆಲೆ: ರಮ್ಯ ಎಂಬುವಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಹೆಂಡತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗಂಡ ಜಗಳಕ್ಕೆ ಕಾರಣನಾದ. ಈ ವೇಳೆ ಗಂಡನನ್ನು ಬಿಟ್ಟುಕೊಡದ ಹೆಂಡತಿ ಮತ್ತು ಗಂಡನ ಪ್ರಿಯತಮೆ ನಡುವೆ ವಾಗ್ವಾದ ನಡೆದು ಹೊಡೆದಾಟವೂ ನಡೆಯಿತು. ಆಗ ನ್ಯಾಯಕ್ಕಾಗಿ ಪಂಚಾಯಿತಿ ಕಟ್ಟೆಗೆ ವಿವಾದ ಮೇಲೇರಿತು.
ಪಂಚಾಯಿತಿ ಕಟ್ಟೆಯಲ್ಲಿ ವಾದ-ವಿವಾದ ನಡೆದು ಕೊನೆಗೆ ಪ್ರಿಯತಮೆ ನನ್ನ ಬಳಿ ನಿನ್ನ ಗಂಡ 5 ಲಕ್ಷ ರೂಪಾಯಿ ಸಾಲ ಪಡೆದಿದ್ದಾನೆ, ಈ 5 ಲಕ್ಷ ಸಾಲವನ್ನು ತೀರಿಸಿ ನಿನ್ನ ಗಂಡನನ್ನು ಕರೆದುಕೊಂಡು ಹೋಗು ಎಂದು ಪಂಚಾಯಿತಿ ಕಟ್ಟೆಯಲ್ಲಿ ಹೇಳಿದ್ದಾಳೆ. ಆಗ ಹೆಂಡತಿ ‘ನನಗೆ ನನ್ನ ಗಂಡ ಬೇಕಿಲ್ಲ, ಪೊಲೀಸ್ ಸ್ಟೇಷನ್ನಿಗೆ ಹೋಗಿ ಕೇಸ್ ಹಾಕ್ತೀನಿ. ನಿಮ್ಮನ್ನು ಕೋರ್ಟ್ ಕಚೇರಿಗೆ ಅಲೆಸ್ತೀನಿ’ ಎಂದು ಬೆದರಿಸಿದ್ದಾಳೆ.
ಕೊನೆಗೆ ಜೀವನಾಂಶಕ್ಕಾಗಿ ನನಗೆ 5 ಲಕ್ಷ ರೂಪಾಯಿ ಕೊಡಿ ಎಂದು ಹೆಂಡತಿ ಗಂಡನ ಮುಂದೆ ಬೇಡಿಕೆ ಇಟ್ಟಿದ್ದಾಳೆ. ಆಗ ಪ್ರಿಯತಮೆ ‘ನಾನೇ ನಿನಗೆ 5 ಲಕ್ಷ ರೂಪಾಯಿ ಕೊಡುತ್ತೇನೆ, ಆದರೆ ನಿನ್ನ ಗಂಡನನ್ನು ನನಗೆ ಬಿಟ್ಟುಕೊಡಬೇಕು ಎಂದು ಷರತ್ತು ಹಾಕಿದ್ದಾಳೆ. ಆಗ ತಕ್ಷಣವೇ ಅದಕ್ಕೆ ಒಪ್ಪಿದ ಹೆಂಡತಿ ‘ಆಯ್ತು, ನನಗೆ ನನ್ನ ಗಂಡ ಬೇಕಿಲ್ಲ, ಮುಂದಿನ ತಿಂಗಳು 5 ಲಕ್ಷ ರೂಪಾಯಿ ಕೊಟ್ಟು ನೀನೇ ನನ್ನ ಗಂಡನನ್ನು ಖರೀದಿಸಿಕೊಂಡು ಹೋಗು ಎಂದು ಸೂಚಿಸಿದ್ದಾಳೆ.
5 ಲಕ್ಷ ರೂಪಾಯಿ ಹಣ ಕೊಟ್ಟ ಬಳಿಕ ಗಂಡ ಕಟ್ಟಿದ್ದ ತಾಳಿ ಬಿಚ್ಚಿಡುವ ಒಪ್ಪಂದ ಪತ್ರಕ್ಕೆ ಹೆಂಡತಿ ಒಪ್ಪಿಗೆ ನೀಡಿದ್ದಾಳೆ. ಹೀಗೆ ಪಂಚಾಯಿತಿ ಕಟ್ಟೆಯಲ್ಲೇ ನಡೆದ ಅಪೂಪದ ರಾದ್ಧಾಂತವನ್ನು ಕಂಡು ಗ್ರಾಮಸ್ಥರು ದಂಗಾಗಿ ಹೋಗಿದ್ದಾರೆ.
