ರಾಜಕೀಯ ಸುದ್ದಿ

ಅಂಬೇಡ್ಕರ್ ಆಶಯದಂತೆ ಅಸಮಾನತೆ ತೊಲಗಿಸಲು ನಿರಂತರ ಹೋರಾಟ: ರಾಯಸಂದ್ರ ಸೋಮಶೇಖರ್

Share It

ದೇವನಹಳ್ಳಿ : ಮಹಾ ಮಾನವತಾವಾದಿ ಭಾರತರತ್ನ ಬಾಬಾ ಸಾಹೇಬ್ ಡಾ. ಭೀಮ್ ರಾವ್ ಅಂಬೇಡ್ಕರ್ ಅವರು ಭಾರತದ ಸಂವಿಧಾನಶಿಲ್ಪಿಯಾಗಿ ಎಲ್ಲರೂ ಸಮಾನತೆಯಿಂದ ಬದುಕಲು ಅವಕಾಶವಾಗುವಂತೆ ಸಂವಿಧಾನವನ್ನು ರಚಿಸಿದ ಮಹಾನಾಯಕ, ಅವರು ತಳ ಸಮುದಾಯಗಳ ಬಾಳಿಗೆ ಬೆಳಕಾಗಿ ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕುಗಳನ್ನು ದೊರಕಿಸುವ ನಿಟ್ಟಿನಲ್ಲಿ ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ಹೋರಾಡಿದ ಮಹಾನಾಯಕ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಮಹಾನ್ ಮಾನವತಾವಾದಿ. ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಇಂದು ದೇಶಾದ್ಯಂತ ಕೋಟ್ಯಾಂತರ ಮಂದಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ, ತಳ ಸಮುದಾಯಗಳು ಸೇರಿದಂತೆ ಎಲ್ಲರಿಗೂ ಮತದಾನದ ಹಕ್ಕು ದೊರಕಿದೆ, ದೇಶವನ್ನು ಮನುವಾದಿಗಳ ಕಪಿಮುಷ್ಟಿಯಿಂದ ಬಿಡಿಸಲು ಅವಿರತವಾಗಿ ತಮ್ಮ ಇಡೀ ಜೀವನಪರ್ಯಂತ ಶ್ರಮಿಸಿದ್ದಾರೆ. ಅವರ ಮಾತನ್ನಲ್ಲೇ ಹೇಳುವುದಾದರೆ “ಇದುವರೆವಿಗೂ ಏನನ್ನು ಸಾಧಿಸಿರುವೆನೋ ಅದನ್ನು ನನ್ನ ಜೀವನಪರ್ಯಂತ ನನ್ನ ಶತ್ರುಗಳ ಜೊತೆ ಕಾದಾಡುತ್ತಾ, ಅನಿಯತ ಸಮಸ್ಯೆಗಳನ್ನು ಎದುರಿಸುತ್ತಾ, ನಿರಂತರ ನೋವನ್ನು ಅನುಭವಿಸುತ್ತಾ ಪಡೆದಿದ್ದೇನೆ. ತುಂಬಾ ಶ್ರಮವಹಿಸಿ ನಾನು ಸಮಾಜದಲ್ಲಿನ ಗುಲಾಮಗಿರಿ, ಶೋಷಣೆ, ದಬ್ಬಾಳಿಕೆಗಳ ವಿರುದ್ಧವಾಗಿ ಈ ಹೋರಾಟದ ರಥವನ್ನು ಇಲ್ಲಿಗೆ ತಂದಿದ್ದೇನೆ, ಏನೇ ಅಡೆತಡೆ ಬರಲಿ, ಅದರ ಮಾರ್ಗದಲ್ಲಿ ಎಂತಹದ್ದೇ ಏರುಪೇರುಗಳಾಗಲೀ, ತೊಂದರೆಗಳಾಗಲೀ ಈ ಹೋರಾಟದ ರಥ ಮುನ್ನಡೆಸಲೇ ಬೇಕು, ಈ ರಥವನ್ನು ಮುನ್ನಡೆಸಲು ಸಾಧ್ಯವಾಗದಿದ್ದರೆ ಈಗ ಅದು ಎಲ್ಲಿದೆಯೋ ಅದನ್ನು ಅಲ್ಲಿಯೇ ಇರಲು ಬಿಡಿ ಯಾವುದೇ ಕಾರಣಕ್ಕೂ ಅದನ್ನು ಹಿಂದೆ ಸರಿಯಲು ಬಿಡಬಾರದು ಎಂದು ಬಾಬಾ ಸಾಹೇಬರು ನಮಗೆ ಸಂದೇಶ ಕೊಟ್ಟಿದ್ದಾರೆ, ಅದರಂತೆ ನಾವು ಇಂದಿನ ದಿನಗಳಲ್ಲಿ ಸಮಾಜದಲ್ಲಿ ಇನ್ನೂ ಮುಂದುವರೆದಿರುವ ಅಸಮಾನತೆಯನ್ನು ತೊಲಗಿಸಲು ನಿರಂತರವಾಗಿ ಹೋರಾಟ ಮಾಡಬೇಕು ಯುವಕರು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ನಮ್ಮ ಮೇಲೆ ನಡೆಯುವ ದೌರ್ಜನ್ಯ ದಬ್ಬಾಳಿಕೆಗಳ ವಿರುದ್ಧ ನಿಲ್ಲಬೇಕು, ಎಂದು ಅಂಬೇಡ್ಕರ್ ಸೇನೆಯ ತಾಲ್ಲೂಕು ಅಧ್ಯಕ್ಷ ರಾಯಸಂದ್ರ ಸೋಮಶೇಖರ್ ಕರೆ ನೀಡಿದರು.

ದೇವನಹಳ್ಳಿ ತಾಲೂಕಿನ ರಾಯಸಂದ್ರ ಗ್ರಾಮದಲ್ಲಿ ಅಂಬೇಡ್ಕರ್ ಅವರ 133ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಂ ಅವರ 117ನೇ ಜನ್ಮ ದಿನಾಚರಣೆಯ ಅಂಗವಾಗಿ ಬಾಬಾ ಸಾಹೇಬ್ ಅಂಬೇಡ್ಕರ್, ಬಾಬು ಜಗಜೀವನ್ ರಾಂ, ಭಗವಾನ್ ಬುದ್ದರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಬೆಟ್ಟಕೋಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಮಂಜುನಾಥ್ ಮಾತನಾಡಿ, ಅಂಬೇಡ್ಕರ್ ಅವರು ಸ್ವಂತಕ್ಕೆ ಏನನ್ನು ಬಯಸದವರು, ವಿಶೇಷವಾಗಿ ಮಹಿಳೆಯರಿಗೆ ಶಿಕ್ಷಣ, ಸಮಾನತೆಯ ಹಕ್ಕು ಕಲ್ಪಿಸಿಕೊಟ್ಟವರು. ಅವರು ಹೋರಾಟದ ಮೂಲಕ ನಮಗೆ ದೊರಕಿಸಿಕೊಟ್ಟ ಸಂವಿಧಾನವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಏಳಿಗೆಗಾಗಿ ಶ್ರಮಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿ ಸುಧಾಕರ್, ಮುನಿರಾಜು ಬಾಷ, ನಾರಾಯಣಮ್ಮ, ಉಷಾ, ಚೈತ್ರಾ ಸೇರಿದಂತೆ ಗ್ರಾಮಸ್ಥರು ಇದ್ದರು.


Share It

You cannot copy content of this page