ರಾಜಕೀಯ ಸುದ್ದಿ

ಮೇಕೆದಾಟು ಯೋಜನೆಗೆ ತಮಿಳುನಾಡು ಸಹಕಾರ ನೀಡಲು ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ

Share It

ಬೆಂಗಳೂರು: “ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದ್ದು, ಈ ಯೋಜನೆ ಜಾರಿಗೆ ಸಹಕಾರ ನೀಡಿ ಎಂದು ನಮ್ರತೆಯಿಂದ ಕೇಳಿಕೊಳ್ಳುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಮಿಳುನಾಡಿಗೆ ಮನವಿ ಮಾಡಿದರು.

ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು ಸರ್ಕಾರ ಸರ್ವಪಕ್ಷ ಸಭೆ ಕರೆದಿರುವ ಬಗ್ಗೆ ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಕಾವೇರಿ ನೀರಿನ ವಿಚಾರದಲ್ಲಿ ನಾವು ಸರ್ವಪಕ್ಷ ಸಭೆ ಮಾಡಿದಂತೆ, ತಮಿಳುನಾಡಿನವರು ಸಹ ಸರ್ವಪಕ್ಷ ಸಭೆ ಮಾಡುತ್ತಿದ್ದಾರೆ. ಅದು ಅವರ ಹಕ್ಕು. ಅವರ ಸಭೆಗೆ ನಮ್ಮ ಆಕ್ಷೇಪವಿಲ್ಲ. ಆದರೆ ನಿಮಗೂ ಹೆಚ್ಚು ಅನುಕೂಲ ಆಗುವ ಮೇಕೆದಾಟು ಯೋಜನೆಗೆ ಸಹಕಾರ ನೀಡಲಿ” ಎಂದು ತಿಳಿಸಿದರು.

“ರಾಜ್ಯದಲ್ಲಿ ಸೋಮವಾರದಿಂದ ಹೆಚ್ಚು ಮಳೆ ಬೀಳುತ್ತಿದ್ದು, ಕಾವೇರಿ ಕೊಳ್ಳದ ಅಣೆಕಟ್ಟುಗಳಿಗೆ ಒಳಹರಿವು ಪ್ರಮಾಣ ಹೆಚ್ಚಾಗಿದೆ. ಹಾರಂಗಿಯಿಂದ 20 ಸಾವಿರ ಕ್ಯೂಸೆಕ್ ನಷ್ಟು ನೀರನ್ನು ಹೊರಗೆ ಹರಿಬಿಡಲಾಗುತ್ತಿದೆ. ಮಳೆಯೇ ನಮಗೆ ಆಧಾರ.

ನಾನು ತಮಿಳುನಾಡಿನ ಬಳಿ ಮನವಿ ಮಾಡಿಕೊಳ್ಳುತ್ತೇನೆ. ನಿಮ್ಮ ಹಿತಾಸಕ್ತಿ ಕಾಪಾಡುವುದಕ್ಕಾಗಿ ಮೇಕೆದಾಟು ಯೋಜನೆಗೆ ಸಹಕಾರ ನೀಡಿ. ಈ ಯೋಜನೆ ನಮಗಿಂತ ನಿಮಗೆ ಹೆಚ್ಚು ಅನುಕೂಲವಾಗುತ್ತದೆ. ಈ ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರನ್ನು ನಿಮಗೇ ನೀಡಲಾಗುವುದು.

ಬೆಂಗಳೂರಿನಲ್ಲಿ ಕನ್ನಡಿಗರು, ತಮಿಳಿಗರು, ಆಂಧ್ರದವರು ಸೇರಿದಂತೆ ಉತ್ತರ ಭಾರತದ ರಾಜ್ಯಗಳ ಜನರಿದ್ದಾರೆ. ಎಲ್ಲರಿಗೂ ಕುಡಿಯುವ ನೀರು ಲಭಿಸಲಿದೆ. ಹೀಗಾಗಿ ಮೇಕೆದಾಟು ಯೋಜನೆಗೆ ಸಹಕಾರ ನೀಡುವಂತೆ ಕರ್ನಾಟಕ ರಾಜ್ಯದ ಪರವಾಗಿ ವಿನಮ್ರವಾಗಿ ಮನವಿ ಮಾಡುತ್ತೇವೆ” ಎಂದು ತಿಳಿಸಿದರು.

ಮಳೆ ಇದೇ ರೀತಿ ಬಿದ್ದರೆ, ನೀವು ತಮಿಳುನಾಡಿಗೆ ನೀರು ಬಿಡುತ್ತೀರಾ ಎಂದು ಕೇಳಿದಾಗ, “ಖಂಡಿತವಾಗಿ ಬಿಡುತ್ತೇವೆ. ನಾವು ಬಿಡಲೇಬೇಕು. ಒಳಹರಿವು ಹೆಚ್ಚಳವಾದರೆ ನಾವು ನೀರನ್ನು ಹರಿಸಲೇಬೇಕು. ಅದನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ” ಎಂದು ತಿಳಿಸಿದರು.

ಕುಮಾರಸ್ವಾಮಿ ತಮ್ಮ ಪಕ್ಷದವರನ್ನು ಗೋಡಂಬಿ, ದ್ರಾಕ್ಷಿ ತಿನ್ನಲು ಕಳಿಸಿದ್ದರಾ?

ಸರ್ವಪಕ್ಷ ಸಭೆಗೆ ಗೋಡಂಬಿ ದ್ರಾಕ್ಷಿ ತಿನ್ನಲು ಹೋಗಬೇಕಿತ್ತಾ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಸಿನಿಮಾ ಶೈಲಿಯಲ್ಲಿ ಮಾತನಾಡುತ್ತಿದ್ದಾರೆ. ಗೋಡಂಬಿ, ದ್ರಾಕ್ಷಿ ತಿನ್ನಲು ನಾವು ಕರೆದಿದ್ದೇವಾ? ಹಾಗಿದ್ದರೆ, ಕುಮಾರಸ್ವಾಮಿ ಅವರು ತಮ್ಮ ಪಕ್ಷದ ನಾಯಕರನ್ನು ಸರ್ವಪಕ್ಷ ಸಭೆಗೆ ಗೋಡಂಬಿ, ದ್ರಾಕ್ಷಿ ತಿನ್ನಲು ಕಳುಹಿಸಿದ್ದರೆ? ಕುಮಾರಸ್ವಾಮಿಗೆ ರಾಜಕಾರಣ, ಟೀಕೆ, ಆರೋಪ, ಹಿಟ್ ಅಂಡ್ ರನ್ ಮಾಡುವುದು ಬಿಟ್ಟರೆ, ಕಾವೇರಿ ನೀರು, ನಮ್ಮ ರೈತರ ಹಿತ, ರಾಜ್ಯದ ಹಿತದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ” ಎಂದು ತಿಳಿಸಿದರು.

ಕುಮಾರಸ್ವಾಮಿ ಅವರು ನಿಮ್ಮ ಮೇಲೆ ವೈಯಕ್ತಿಕವಾಗಿ ದಾಳಿ ಮಾಡುತ್ತಿರುವುದೇಕೆ ಎಂದು ಕೇಳಿದಾಗ, “ಅಸೂಯೆ ಬಿಟ್ಟರೆ ಬೇರೇನೂ ಇಲ್ಲ. ಮೊದಲಿಂದಲೂ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಎಲ್ಲಾ ವಿಚಾರವನ್ನು ಬಹಿರಂಗವಾಗಿ ಚರ್ಚೆ ಮಾಡೋಣ ಬಾ ಎಂದು ಕರೆಯುತ್ತಿದ್ದೇನೆ. ಕಳೆದ ಬಾರಿ ಸದನದಲ್ಲಿ ಚರ್ಚೆಗೆ ಕರೆದಾಗಲೂ ಬರಲಿಲ್ಲ” ಎಂದು ತಿಳಿಸಿದರು.

ನಾನು ಯಾವುದೇ ತಪ್ಪು ಮಾಡಿಲ್ಲ:

ತಮ್ಮ ವಿರುದ್ಧದ ಸಿಬಿಐ ಪ್ರಕರಣ ರದ್ದು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿರುವ ಬಗ್ಗೆ ಕೇಳಿದಾಗ, “ಈಗಾಗಲೇ ಈ ಪ್ರಕರಣವನ್ನು ಲೋಕಾಯುಕ್ತ ಸಂಸ್ಥೆಗೆ ನೀಡಲಾಗಿದೆ. ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸುತ್ತಿದೆ. ಆದರೂ ಸಿಬಿಐ ತಮ್ಮ ವ್ಯಾಪ್ತಿ ಮೀರಿ ಈ ಪ್ರಕರಣ ತನಿಖೆ ನಡೆಸಲು ಮುಂದಾಗಿರುವುದು ಏಕೆ ಎಂದು ಗೊತ್ತಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಮುಂದಿನ ಒಂದೆರಡು ದಿನಗಳಲ್ಲಿ ಅವರ ಮುಂದೆ ಹೋಗಿ ನನ್ನ ವಿಚಾರ ತಿಳಿಸುತ್ತೇನೆ. ತನಿಖೆ ಹೆಸರಲ್ಲಿ ನನ್ನ ಜತೆ ವ್ಯವಹಾರ ಮಾಡಿದವರಿಗೆ ಕಿರುಕುಳ ನೀಡಿದ್ದಾರೆ” ಎಂದು ತಿಳಿಸಿದರು.


Share It

You cannot copy content of this page