ಉಪಯುಕ್ತ ಸುದ್ದಿ

ಭರ್ಜರಿ ಮುಂಗಾರು: ಕರ್ನಾಟಕ ಸೇರಿ ದೇಶದಲ್ಲಿ ಉತ್ತಮ ಬಿತ್ತನೆ, ಬಂಪರ್ ಇಳುವರಿ ನಿರೀಕ್ಷೆ

Share It

ನವದೆಹಲಿ: ಜೂನ್‌ ಕೊನೆಯ ವಾರದಿಂದ ದೇಶದ ಪ್ರಮುಖ ಭಾಗಗಳಲ್ಲಿ ಮುಂಗಾರು ಚುರುಕಾಗಿದೆ. ಇದರಿಂದ ಮುಂಗಾರು ಬಿತ್ತನೆ ತನ್ನ ವೇಗವನ್ನು ಹೆಚ್ಚಿಸಿಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಿತ್ತನೆ ಪ್ರದೇಶದಲ್ಲಿ ಶೇ. 10.3ರಷ್ಟು ಏರಿಕೆ ದಾಖಲಾಗಿದ್ದು 5.75 ಕೋಟಿ ಹೆಕ್ಟೇರ್‌ಗೆ ತಲುಪಿದೆ.

75 ಕೋಟಿ ಹೆಕ್ಟೇರ್‌ ಸಾಮಾನ್ಯ ಬಿತ್ತನೆ ಪ್ರದೇಶದ ಶೇ. 53ರಷ್ಟಾಗಿದೆ. ಇದರಲ್ಲಿ ಸೋಮವಾರದ ಹೊತ್ತಿಗೆ ಭತ್ತ, ಬೇಳೆ ಕಾಳು, ಎಣ್ಣೆಕಾಳು, ಕಬ್ಬು ಮತ್ತು ಹತ್ತಿಯನ್ನು ಬಿತ್ತಲಾಗಿದೆ. ಕೃಷಿ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ಈ ಬೆಳೆಗಳ ಬಿತ್ತನೆ ಪ್ರದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.10ರಷ್ಟು ಏರಿಕೆ ದಾಖಲಾಗಿದೆ. ಇದು ಆಹಾರ ಹಣದುಬ್ಬರದ ಭಯವನ್ನು ನಿವಾರಿಸಲಿದೆ ಎಂದು ಅಂದಾಜಿಸಲಾಗಿದೆ.

ಮುಂಬರುವ ತಿಂಗಳುಗಳಲ್ಲಿ ಕೃಷಿ ಉತ್ಪಾದನೆ ಸುಧಾರಿಸಲು ಮತ್ತು ಆಹಾರ ಹಣದುಬ್ಬರವನ್ನು ತಗ್ಗಲು ಮಾನ್ಸೂನ್‌ ಪ್ರಗತಿ ಮತ್ತು ಬಿತ್ತನೆಯಲ್ಲಿನ ವೇಗವನ್ನು ನಾವು ನಿರೀಕ್ಷಿಸುತ್ತೇವೆ,” ಎಂದು ರೇಟಿಂಗ್‌ ಏಜೆನ್ಸಿ ಕ್ರಿಸಿಲ್‌ ತಿಳಿಸಿದೆ.

ಕೇವಲ ಶೇ. 2ರಷ್ಟು ಮಳೆ ಕೊರತೆ
ಮುಂಗಾರು ಸಕ್ರಿಯವಾಗಿದೆ. ಕಳೆದ ಸೋಮವಾರದ ತನಕ ಒಟ್ಟು ಬೀಳಬೇಕಾದ ಮಳೆಯಲ್ಲಿ ಶೇ.2ರಷ್ಟು ಮಾತ್ರ ಕೊರತೆಯಾಗಿದೆ. ದೇಶದ 729 ಜಿಲ್ಲೆಗಳ ಪೈಕಿ ಶೇ.61ರಷ್ಟು ಜಿಲ್ಲೆಗಳಲ್ಲಿ ಕೆಲವೆಡೆ ಹೆಚ್ಚುವರಿ ಹಾಗೂ ಉಳಿದೆಡೆ ಸಾಮಾನ್ಯ ಪ್ರಮಾಣದ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಜುಲೈ 12ರ ವೇಳೆಗೆ ಭತ್ತ ಬೆಳೆಯುವ ಪ್ರದೇಶದಲ್ಲಿ ಶೇ. 21ರಷ್ಟು ಏರಿಕೆಯಾಗಿದ್ದು, 1.16 ಕೋಟಿ ಹೆಕ್ಟೇರ್‌ಗೆ ಹೆಚ್ಚಿದೆ. ದ್ವಿದಳ ಧಾನ್ಯಗಳ ಬಿತ್ತನೆ ಪ್ರಮಾಣವೂ ಶೇ. 25.8ರಷ್ಟು ಏರಿಕೆಯಾಗಿದೆ. ಎಣ್ಣೆಕಾಳುಗಳ ಬಿತ್ತನೆ ಪ್ರದೇಶದಲ್ಲಿ ಶೇ. 22ರಷ್ಟು ಹೆಚ್ಚಳ ದಾಖಲಾಗಿದೆ.

ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಮುಂಗಾರು ಮಳೆ ಅಧಿಕವಾಗಿದ್ದು ಬಿತ್ತನೆ ಕೂಡ ಹೆಚ್ಚಿದೆ. ಇಲ್ಲಿಯ ತನಕ ಶೇ. 29ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಮುಂಗಾರು ಬಿತ್ತನೆ ಸೆಪ್ಟೆಂಬರ್‌ ತನಕ ಮುಂದುವರೆಯುತ್ತದೆ.

ದ್ವಿದಳ ಧಾನ್ಯಗಳಾದ ತೊಗರಿ, ಉದ್ದು ಮತ್ತು ಹೆಸರು ಕಾಳುಗಳ ಬಿತ್ತನೆ ಪ್ರದೇಶ ಶೇ. 26ರಷ್ಟು ಹೆಚ್ಚಿದೆ. ಇದು 2024-25 ಋತುವಿನಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಎಣ್ಣೆಕಾಳುಗಳಾದ ನೆಲಗಡಲೆ, ಸೋಯಾಬೀನ್‌ ಮತ್ತು ಸೂರ್ಯಕಾಂತಿ ಬಿತ್ತನೆ ಪ್ರದೇಶ ಶೇ. 22ರಷ್ಟು ಹೆಚ್ಚಿದೆ. 1.404 ಕೋಟಿ ಹೆಕ್ಟೇರ್‌ನಲ್ಲಿ ಬಿತ್ತನೆಗೆ ಬೇಕಾದ ಪ್ರಾಥಮಿಕ ಕಾರ್ಯಗಳನ್ನು ಮುಗಿಸಲಾಗಿದೆ.

ಇದರಿಂದ ಮುಂಬರುವ ದಿನಗಳಲ್ಲಿ ಖಾದ್ಯ ತೈಲ ಆಮದನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ. ಈಗ ತಾಳೆಎಣ್ಣೆ, ಸೋಯಾಬೀನ್‌ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಬಳಕೆಯಲ್ಲಿ ಶೇ. 60ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಕಬ್ಬಿನ ಇಳುವರಿ ಕೂಡ ಹೆಚ್ಚಾಗಲಿದೆ. ಈ ಹಂಗಾಮಿನಲ್ಲಿ ಬಿತ್ತನೆ ಬಹುತೇಕ ಪೂರ್ಣಗೊಂಡಿದೆ. ಒಟ್ಟು 57.6 ಲಕ್ಷ ಹೆಕ್ಟೇರ್‌ನಲ್ಲಿ ಬೀಜಗಳು ಕುಡಿಯೊಡೆದಿವೆ. ಇದು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಹತ್ತಿ ಬೆಳೆ 95.7 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಕಳೆದ ವರ್ಷಕ್ಕಿಂತ ಶೇ. 2.9ರಷ್ಟು ಅಧಿಕವಾಗಿದೆ.

ಕೃಷಿ ಸಚಿವಾಲಯ 2024-25ರ ಬೆಳೆ ವರ್ಷದಲ್ಲಿ (ಜುಲೈ-ಜೂನ್‌) 34 ಕೋಟಿ ಟನ್‌ ಆಹಾರ ಧಾನ್ಯಗಳ ಇಳುವರಿ ಗುರಿಯನ್ನು ಹೊಂದಿದೆ. ಕಳೆದ ಬಾರಿ 32.88 ಕೋಟಿ ಟನ್‌ ಗುರಿ ಹೊಂದಲಾಗಿತ್ತು. ಈ ವರ್ಷದ ಗುರಿಯು ಮುಂಗಾರು ಋುತು (15.997 ಕೋಟಿ ಟನ್‌) ರಾಬಿ ಋುತು (16.4 ಕೋಟಿ ಟನ್‌) ಹಾಗೂ ಬೇಸಿಗೆ ಋತುವಿನಲ್ಲಿ 1.643 ಕೋಟಿ ಟನ್‌ ಉತ್ಪಾದನೆಯನ್ನು ಒಳಗೊಂಡಿದೆ.


Share It

You cannot copy content of this page