ಬೆಂಗಳೂರು: ಪ್ರದೀಪ್ ಈಶ್ವರ್, ನಿನಗೆ ಏನಾಗಿದೆ? ಕೈಗೆ ಕಬ್ಬಿಣ ಕೊಡಬೇಕಾ? ಹೀಗೆಂದಿದ್ದು ಡಾ. ಸುಧಾಕರ್ ಆಗಲೀ, ಬಿಜೆಪಿಯವರಾಗಲೀ ಅಲ್ಲ, ಸ್ವತಃ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮತ್ತು ಮೂಡಾ ಹಗರಣದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಶಾಸಕರು, ಬಾವಿಗಿಳಿದು ನಿಂತಿದ್ದರೆ, ಅವರ ಕಡೆಗೆ ಕೂಗುತ್ತಾ ನಿಂತಿದ್ದ ಪ್ರದೀಪ್ ಈಶ್ವರ್, ಬಾಯಿಗೆ ಬಂದಂತೆ ಕಿರುಚುತ್ತಿದ್ದರು.
ಸುಮ್ಮನಿರುವಂತೆ ಸುಮಾರು ಸಲ ಎಚ್ಚರಿಕೆ ನೀಡಿದ ಸ್ಪೀಕರ್ ಕಡೆಗೆ ಪ್ರದೀಪ್ ಈಶ್ವರ್ ಗಮನವನ್ನೇ ಕೊಡಲಿಲ್ಲ. ನಾಲ್ಕೈದು ಬಾರಿ ಎಚ್ಚರಿಕೆ ನೀಡಿದ ಸ್ಪೀಕರ್ ಖಾದರ್, ಕೊನೆಗೆ ರೊಚ್ಚಿಗೆದ್ದು ಪ್ರದೀಪ್ ಗೆ ಝಾಡಿಸಿದರು.
“ಏಯ್ ಪ್ರದೀಪ್ ಈಶ್ವರ್, ಸ್ವಲ್ಪ ಈ ಕಡೆ ನೋಡು, ಯಾಕಂಗ್ ಕೂಗ್ತಾ ಇದ್ದೀಯಾ? ಪ್ರದೀಪ್ ಈಶ್ವರ್ ನಿಂಗೇನಾಗಿದೆ? ಕಬ್ಬಿಣ ಏನಾದ್ರೂ ಕೊಡಬೇಕಾ? ಏನ್ ಮಾರಾಯ ನೀನು, ನಿನ್ ತಲೆ ನಿಯಂತ್ರಣದಲ್ಲಿ ಇಲ್ವಾ? ಎಂದು ಬೇಸರ ವ್ಯಕ್ತಪಡಿಸಿದರು.
ಪ್ರದೀಪ್ ಈಶ್ವರ್, ಬಹುದೊಡ್ಡ ಭಾಷಣಕಾರ, ಸುಧಾಕರ್ ಗೆ ಪರ್ಯಾಯ ಎಂದು ಚಿಕ್ಕಬಳ್ಳಾಪುರ ಜನ ಗೆಲ್ಲಿಸಿದರು. ತಂದೆ ತಾಯಿ ಸೆಂಟಿಮೆಂಟ್ ಮತ್ತು ಸಿನಿಮಾ ಡೈಲಾಗ್ ಮೂಲಕ ಜನರನ್ನು ಮರುಳು ಮಾಡಿ ಗೆದ್ದ ಪ್ರದೀಪ್, ಆ ನಂಬಿಕೆಯನ್ನು ಒಂದು ವರ್ಷವೂ ಉಳಿಸಿಕೊಳ್ಳಲಿಲ್ಲ. ಹೀಗಾಗಿ, ಲೋಕಸಭೆಯಲ್ಲಿ ಸುಧಾಕರ್ ಗೆಲುವು ಕಂಡಿದ್ದು.
ಪಕ್ಷದ ದೊಡ್ಡ ನಾಯಕರ ಮೆಚ್ಚಿಸುವ ಭರದಲ್ಲಿ ಬಾಯಿಗೆ ಬಂದಂತೆ ಮಾತನಾಡುವುದು, ದೊಡ್ಡದೊಡ್ಡವರ ಬಗ್ಗೆಯೂ ಹಗುರವಾಗಿ ಮಾತನಾಡುವುದು ಪ್ರದೀಪ್ ಗೆ ರೂಢಿಯಾಗಿದೆ. ಸದನದ ಶ್ರೇಷ್ಠತೆ ಅರಿಯುವ ಮೊದಲೇ, ಕಿರುಚಾಟ ಕಂಡು ಸ್ಪೀಕರ್ ಕಬ್ಬಿಣ ಕೊಡುವ ಮಾತನ್ನಾಡಿದ್ದಾರೆ.
ಸ್ಪೀಕರ್ ಮಾತ್ರವಲ್ಲ, ಪ್ರದೀಪ್ ಈಶ್ವರ್ ಭಾಷಣ, ಮಾತುಗಳು, ನಡವಳಿಕೆ ಕಾಂಗ್ರೆಸ್ ಪಕ್ಷದ ನಾಯಕರಲ್ಲೇ ಬೇಸರ ತರಿಸಿವೆ. ಪ್ರಚಾರದಲ್ಲಿ ಇರಲು ಆತ ನಡೆಸುವ ಗಿಮಿಕ್ ಗಳ ಬಗ್ಗೆ ಅನೇಕರು ಅಸಮಾಧಾನ ಹೊಂದಿದ್ದಾರೆ.
ಸಿನಿಮಾ ಡೈಲಾಗ್ ಹೊಡೆಯುತ್ತಾನೆ ಎಂದು ಹಿರಿಯ ಸಚಿವ ರಾಮಲಿಂಗ ರೆಡ್ಡಿ ಒಮ್ಮೆ ಹೇಳಿದ್ದರು, ಇವನಾರೋ ಹುಚ್ಚ ಎಂದುಕೊಂಡೇ ಎಂದು ಸ್ವತಃ ಡಿಕೆ ಶಿವಕುಮಾರ್ ಹೇಳಿದ್ದರು. ಹೀಗೆ ನೆಗೆಟಿವ್ ಅಂಶಗಳಿಂದಲೇ ಪ್ರಚಲಿತದಲ್ಲಿರುವ ಪ್ರದೀಪ್ ಸದನದಲ್ಲಿ ಸ್ಪೀಕರ್ ಕೈಲಿ ಹೀಗನಿಸಿಕೊಂಡಿದ್ದು ಹೆಚ್ಚೇನು ಅಲ್ಲ ಎನ್ನಬಹುದು.