ಬೆಂಗಳೂರು: ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರದ ಬೃಂದಾವನ ಅಭಿವೃದ್ಧಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಅನುಮೋದನೆ ಸಿಕ್ಕಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನವಾಗಲಿದೆ. ಖಾಸಗಿ ಸಂಸ್ಥೆಗಳಿಂದ ಈ ಕುರಿತು ಟೆಂಡರ್ ಆಹ್ವಾನಿಸಿ, ಕಾರ್ಯಯೋಜನೆ ಜಾರಿಗೆ ತರಲು ತೀರ್ಮಾನಿಸಲಾಗಿದೆ.
ಬೃಂದಾವನದಲ್ಲಿ ಡಿಸ್ನಿ ವರ್ಲ್ಡ್ ಮಾದರಿಯಲ್ಲಿ ಬೃಂದಾವನ ಅಭಿವೃದ್ಧಿಗೆ ತೀರ್ಮಾನಿಸಿದ್ದು, ಅಲ್ಲಿ ವಾಟರ್ ಸ್ಪೋರ್ಟ್ಸ್, ಹೆಲಿಪ್ಯಾಡ್, ಕೆ.ಆರ್.ಎಸ್ ಸರ್ಕಲ್, ಬೃಂದಾವನ ಗೇಟ್ ನಿರ್ಮಾಣ, ಕಾವೇರಿ ಮಾತೆಯ ಪ್ರತಿಮೆ ನಿರ್ಮಾಣ, ಕೃಷ್ಣರಾಜ ಒಡೆಯರ್ ಪ್ರತಿಮೆ, ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಿಸಲು ತೀರ್ಮಾನಿಸಲಾಗಿದೆ.
ಟೆಂಡರ್ ಮೂಲಕ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಾಗಲಿದ್ದು, ಆ ಮೂಲಕ ಮೈಸೂರಿನ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿ ಗೊಳಿಸಲು ಸರಕಾರ ಯೋಜಿಸಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಅಸ್ಮಿತೆಯಾದ ಕೆ.ಆರ್.ಎಸ್ ಡ್ಯಾಂ ಮತ್ತೊಂದು ಮಟ್ಟದಲ್ಲಿ ಕಂಗೊಳಿಸಲಿದೆ.
