ಕನಕಪುರ: ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡು ಅಡ್ಡಾಡಡುತ್ತಿದ್ದ ರೌಡಿಶೀಟರ್ ಗಳ ಕಾಲಿಗೆ ಕನಕಪುರ ಪೊಲೀಸರು ಗುಂಡು ಹೊಡೆದು ಬಂಧಿಸಿರುವ ಘಟನೆ ನಡೆದಿದೆ.
ಬೆಂಗಳೂರು ಹೊರವಲಯದ ಕಗ್ಗಲೀಪುರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು ಪೊಲೀಸರು ಬಂಧಿಸಲು ಬಂದಾಗ ಅವರ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ ಪೊಲೀಸರು ಇಬ್ಬರನ್ನೂ ಬಂಧಿಸಲು ಯಶಸ್ವಿಯಾಗಿದ್ದಾರೆ.
3 ದಿನಗಳ ಹಿಂದೆ ನಡೆದ ಹಲ್ಲೆ ನಡೆಸಿದ ಪ್ರಕರಣವೊಂದರಲ್ಲಿ ರೌಡಿಶೀಟರ್ ಗಳ ಮೇಲೆ ದೂರು ದಾಖಲಾಗಿತ್ತು. ಹಲ್ಲೆಯ ವೇಳೆ ಒಬ್ಬನ ಕೈ ಕಟ್ ಮಾಡಿದ್ದ ಆರೋಪಿಗಳು ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು. ಆದರೆ, ಪೊಲೀಸರ ಕೈಗೆ ಸಿಗದ ಆರೋಪಿಗಳು ತಪ್ಪಿಸಿಕೊಂಡಿದ್ದರು.
ಕಗ್ಗಲೀಪುರ ಬಳಿ ನಡೆದಿರುವ ಫೈರಿಂಗ್ ನಲ್ಲಿ ಹರ್ಷ ಆಲಿಯಾಸ್ ಕೈಮ , ಕರುಣೇಶ್ ಆಲಿಯಾಸ್ ಕಣ್ಣ ಎಂಬ ರೌಡಿ ಶೀಟರ್ ಗಳ ಕಾಲಿಗೆ ಗುಂಡು ತಗುಲಿದೆ. ಪೊಲೀಸ್ ಸಿಬ್ಬಂದಿ ಶಿವಕುಮಾರ್ ಗಾಯಗೊಂಡಿದ್ದಾರೆ.
ಪೊಲೀಸ್ ಇನ್ಸ್ ಪೆಕ್ಟರ್ ಮಿಥುನ್ ಶಿಲ್ಪಿ ಮತ್ತು ಪಿಎಸ್ಐ ಮನೋಹರ್ ಅವರು ಫೈರಿಂಗ್ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
