ಬೆಂಗಳೂರು:ಸುದ್ದಿಗೋಷ್ಠಿ ನಡೆಸುವಾಗಲೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮೂಗಿನಿಂದ ರಕ್ತ ಸ್ರಾವವಾಗಿದ್ದು ಕ್ಷಣ ಕಾಲ ಆತಂಕ ಮೂಡಿಸಿತ್ತು.
ಮೂಡಾ ಹಗರಣದ ವಿರುದ್ಧದ ಪಾದಯಾತ್ರೆಗೆ ಆಯೋಜನೆಗೆ ಸಂಬಂಧಿಸಿದಂತೆ ನಡೆದ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಸಭೆಯ ನಂತರ ಸುದ್ದಿಗೋಷ್ಠಿ ನಡೆಸುವ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಮೂಗಿನಿಂದ ರಕ್ತಸ್ರಾವವಾಗಿತ್ತು. ಇದು ಕ್ಷಣ ಕಾಲ ಅತಂಕ ಮೂಡಿಸಿತು.
ತಕ್ಷಣವೇ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ, ಕುಮಾರಸ್ವಾಮಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದರು. ಚಿಕಿತ್ಸೆಯ ನಂತರ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಯಾರೂ ಆತಂಕಪಡುವ ಅಗತ್ಯವಿಲ್ಲ. ಕೇಂದ್ರ ಸಚಿವನಾಗಿ, ಬಿಡುವಿಲ್ಲದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪರಿಣಾಮ ಆಯಾಸವಾಗಿದೆ ಅಷ್ಟೇ ಎಂದರು.
ನಾನು ಚೇತರಿಸಿಕೊಂಡು, ಮುಂದೆ ಮತ್ತಷ್ಟು ಒಳ್ಳೆಯ ಕೆಲಸ ಮಾಡಬೇಕಿದೆ. ಪಕ್ಷ ಸಂಘಟನೆ ಮಾಡಬೇಕಿದೆ. ಅದಕ್ಕೆಲ್ಲ ನಿಮ್ಮ ಹಾರೈಕೆ ಬೇಕು ಎಂದು ಮನವಿ ಮಾಡಿದರು. ವೈದ್ಯರು ಕೂಡ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಹಾರೈಕೆ : ಈ ನಡುವೆ ಮೂಡಾ ಹಗರಣದ ವಿರುದ್ಧ ಹೋರಾಟ ಮಾಡಲು ಸಜ್ಜಾಗುವ ವೇಳೆಯೇ ಕುಮಾರಸ್ವಾಮಿ ಅವರ ಆರೋಗ್ಯ ಏರುಪೇರಾಗಿದ್ದು, ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಕುಮಾರಸ್ವಾಮಿ ಅವರಿಗೆ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.
