ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗುವ ಮುನ್ಸೂಚನೆ ಸಿಕ್ಕಿದ್ದು, ನಾಳೆ ದೆಹಲಿಗೆ ತೆರಳುವ ಸಿಎಂ, ಡಿಸಿಎಂ ಸಂಪುಟ ವಿಸ್ತರಣೆಯ ಸಿಹಿ ಸುದ್ದಿ ತರಲಿದ್ದಾರೆ ಎನ್ನಲಾಗಿದೆ.
ಇದು ಕೆಲವರಿಗೆ ಸಿಹಿಯಾದರೆ, ಸರಿಯಾಗಿ ಕೆಲಸ ಮಾಡದ ಕೆಲವರಿಗೆ ಕಹಿಯಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ವೇಳೆ ಪಕ್ಣದ ಗೆಲುವಿಗೆ ಶ್ರಮಿಸಿದ ಲಕ್ಷ್ಮಣ ಸವದಿ, ಶಿವಲಿಂಗೇಗೌಡ, ಎನ್.ವೈ ಗೋಪಾಲಕೃಷ್ಣ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
ಲಕ್ಷ್ಮಣ ಸವದಿ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆ ಸೇರಿದಂತೆ ಕೆಲ ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ್ದರು. ಬಿಜೆಪಿ ಬಿಟ್ಟು ಬಂದಿದ್ದ ಅವರು, ಬಿಜೆಪಿ ವಿರುದ್ಧ ಲಿಂಗಾಯತ ಮತಗಳ ಕ್ರೂಢೀಕರಣಕ್ಕೆ ಕಾರಣವಾಗಿದ್ದರು. ಮೊದಲ ಹಂತದಲ್ಲಿಯೇ ಅವರಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇತ್ತಾದರೂ, ಕಾರಣಾಂತರಗಳಿಂದ ಸಿಕ್ಕಿರಲಿಲ್ಲ. ಇದೀಗ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು, ಸಿಎಂ ಮತ್ತು ಡಿಸಿಎಂ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಇನ್ನು ಬಳ್ಳಾರಿ ಜಿಲ್ಲೆಯಲ್ಲಿ ವಾಲ್ಮೀಕಿ ಹಗರಣದ ಕಾರಣಕ್ಕೆ ತೆರವಾಗಿರುವ ಸಚಿವ ಸ್ಥಾನವನ್ನು ಎನ್.ವೈ.ಗೋಪಾಲಕೃಷ್ಣ ಅವರಿಗೆ ಕೊಡಲು ತೀರ್ಮಾನಿಸಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ತುಕಾರಾಂ ಗೆಲುವಿಗೆ ನೀಡಿದ ಕಾಣಿಕೆ ಹಾಗೂ ನಾಗೇಂದ್ರ ಬಂಧನದಿಂದ ಪಕ್ಷಕ್ಕಾಗಿರುವ ಡ್ಯಾಮೇಜ್ ಕಂಟ್ರೋಲ್ ಗೆ ಗೋಪಾಲಕೃಷ್ಣ ಅವರಿಗೆ ಮಂತ್ರಿ ಸ್ಥಾನ ಸಿಗುವುದು ಬಹುತೇಕ ಫಿಕ್ಸ್ ಎನ್ನಲಾಗಿದೆ.
ಶಿವಲಿಂಗೇಗೌಡ ಜೆಡಿಎಸ್ ನಾಯಕರನ್ನು ಎದುರು ಹಾಕಿಕೊಂಡು ಹಾಸನದಲ್ಲಿ ಗೆದ್ದಿರುವ ಏಕೈಕ ಶಾಸಕ. ಜತೆಗೆ, ಲೋಕಸಭೆಯಲ್ಲಿ ಪಕ್ಷಕ್ಕೆ ಗೆಲುವು ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಏಳು ಕ್ಷೇತ್ರದಲ್ಲಿ ಒಂದರಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದ್ದರೂ, ಲೋಕಸಭೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ಶ್ರೇಯಸ್ ಪಟೇಲ್ ಗೆಲುವಿನಲ್ಲಿ ಶಿವಲಿಂಗೇಗೌಡ ಅವರ ಪಾತ್ರ ಮಹತ್ವದ್ದಾಗಿದೆ ಎನ್ಮಬಹುದು. ಈ ಹಿನ್ನೆಲೆಯಲ್ಲಿ ಶಿವಲಿಂಗೇಗೌಡ ಮಂತ್ರಿಮಂಡಲ ಸೇರುವುದು ಬಹುತೇಕ ಖಚಿತವಾಗಿದೆ.
ತಲೆದಂಡ ಯಾರದ್ದು?: ಮೂವರು ಸಂಪುಟ ಸೇರುವ ವಿಷಯ ಮುನ್ನಲೆಗೆ ಬರುತ್ತಿದ್ದಂತೆ ಸಂಪುಟದಿಂದ ಹೊರನಡೆಯುವುದು ಯಾರು ಎಂಬುದು ಇದೀಗ ಚರ್ಚೆಗೆ ಕಾರಣವಾಗಿದೆ. ನಾಗೇಂದ್ರ ರಾಜೀನಾಮೆಯಿಂದ ಒಂದು ಸ್ಥಾನ ತೆರವಾಗಿದ್ದು, ಮತ್ತೆರೆಡು ಸ್ಥಾನ ತೆರವುಗೊಳಿಸಲು ಯಾರಾದರೂ ರಾಜೀನಾಮೆ ನೀಡಲೇಬೇಕು. ಹಾಗಾದರೆ, ಯಾರನ್ನು ಹೊರಗಿಡುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ. ಹಾಸನ ಉಸ್ತುವಾರಿ ಅಚಿವ ರಾಜಣ್ಣ ಸ್ಥಾನದ ಮೇಲೆ ತೂಗುಗತ್ತಿಯಿದೆ ಎಂಬ ಅನುಮಾನ ಮೂಡಿದೆ. ಚಲುವರಾಯಸ್ವಾಮಿ ರಾಜೀನಾಮೆಗೂ ಹೈಕಮಾಂಡ್ ಸೂಚಿಸುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬಂದಿವೆ.
