ಪ್ಯಾರಿಸ್ ಒಲಂಪಿಕ್ಸ್ 2024: ಶೂಟಿಂಗ್ ನಲ್ಲಿ ಭಾರತಕ್ಕೆ 2ನೇ ಕಂಚಿನ ಪದಕ

Share It

ಫ್ರಾನ್ಸ್ ದೇಶದ ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಓಲಂಪಿಕ್ಸ್-2024 ರಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಡಬಲ್ಸ್ ಸ್ಫರ್ಧೆಯಲ್ಲಿ ಭಾರತವು ಕಂಚಿನ ಪದಕ ಗೆದ್ದುಕೊಂಡಿದೆ.

3ನೇ ಸ್ಥಾನಕ್ಕಾಗಿ ನಡೆದ ಈ ಸ್ಪರ್ಧೆಯಲ್ಲಿ ರಿಪಬ್ಲಿಕ್ ಆಫ್ ಕೊರಿಯಾದ ಓಹ್ ಯೆ ಜಿನ್ ಮತ್ತು ಲೀ ವೊನ್ಹೋ ಅವರನ್ನು 16-10 ಅಂತರದಿಂದ ಸೋಲಿಸಿ ಮನುಭಾಕರ್–ಸರಬ್ಜೋತ್ ಸಿಂಗ್ ಜೋಡಿ ಭಾರತಕ್ಕೆ 2ನೇ ಪದಕ ಗೆದ್ದುಕೊಟ್ಟಿದ್ದಾರೆ.

ಸೋಮವಾರ ಫ್ರಾನ್ಸ್‌ನ ಚಟೌರೌಕ್ಸ್‌ನಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ 3ನೇ ಸ್ಥಾನಗಳಿಸಿ ಕಂಚಿನ ಪದಕದ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತೀಯ ಜೋಡಿ ಒಟ್ಟು 580 ಅಂಕಗಳನ್ನು ಕಲೆಹಾಕಿದ್ದರು.

ಮತ್ತೊಂದೆಡೆ ರಿಪಬ್ಲಿಕ್ ಆಫ್ ಕೊರಿಯಾದ ಓಹ್ ಯೆ ಜಿನ್ ಮತ್ತು ಲೀ ವೊನ್ಹೋ 579 ಅಂಕಗಳಿಸಿ 4ನೇ ಸ್ಥಾನ ಪಡೆದಿದ್ದರು. ಇಲ್ಲಿ 3ನೇ ಮತ್ತು 4ನೇ ಸ್ಥಾನಗಳನ್ನು ಪಡೆದ ಸ್ಪರ್ಧಿಗಳ ನಡುವೆ ಕೇವಲ 1 ಅಂಕಗಳ ವ್ಯತ್ಯಾಸವಿದ್ದಿದ್ದರಿಂದ ಕಂಚಿನ ಪದಕದ ಸ್ಪರ್ಧೆಯಲ್ಲಿ ಉತ್ತಮ ಪೈಪೋಟಿ ನಿರೀಕ್ಷಿಸಲಾಗಿತ್ತು.

ಅದರಂತೆ ಇದೀಗ ಕೊರಿಯನ್ ಜೋಡಿಯನ್ನು ಸೋಲಿಸಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಭಾರತದ ಕೀರ್ತಿ ಪಾತಾಕೆಯನ್ನು ಮುಗಿಲೆತ್ತರಕ್ಕೇರಿಸಿದ್ದಾರೆ.

ಮನು ಭಾಕರ್ 2ನೇ ಪದಕ:

ವಿಶೇಷ ಎಂದರೆ ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮನು ಭಾಕರ್​ಗೆ ಇದು 2ನೇ ಪದಕ. ಇದಕ್ಕೂ ಮುನ್ನ ಮಹಿಳಾ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ 3ನೇ ಸ್ಥಾನ ಅಲಂಕರಿಸುವ ಮೂಲಕ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಭಾರತದ ಪದಕದ ಖಾತೆ ತೆರೆದಿದ್ದರು.

ಇದೀಗ ಸರಬ್ಜೋತ್ ಸಿಂಗ್ ಜೊತೆಗೂಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆದಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಮನು ಭಾಕರ್ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತಕ್ಕೆ 2ನೇ ಪದಕ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಇನ್ನು ಮನು ಭಾಕರ್ 25 ಮೀಟರ್ ಏರ್ ಪಿಸ್ತೂಲ್ ಮಹಿಳಾ ಸ್ಫರ್ಧೆಯಲ್ಲೂ ಭಾಗವಹಿಸುತ್ತಿದ್ದು, ಹೀಗಾಗಿ ಭಾರತೀಯ ನಾರಿಯಿಂದ 3ನೇ ಪದಕವನ್ನು ನಿರೀಕ್ಷಿಸಬಹುದಾಗಿದೆ..


Share It

You May Have Missed

You cannot copy content of this page