ರಾಜ್ಯಾದ್ಯಂತ ವರುಣನ ಆರ್ಭಟ: ಎಲ್ಲೆಲ್ಲಿ ಏನೇನು ಅನಾಹುತ? ಇಲ್ಲಿದೆ ಸಂಕ್ಷಿಪ್ತ ಮಾಹಿತಿ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿ ಜನಜೀವನ ದಿಕ್ಕೆಟ್ಟುಹೋಗಿದೆ. ಈ ಕುರಿತು ರಾಜ್ಯಾದ್ಯಂತ ಆಗಿರುವ ಸಮಸ್ಯೆಗಳ ಕುರಿತು ಮಾಹಿತಿ ಇಲ್ಲಿದೆ.
ಕರಾವಳಿಯಲ್ಲಿ ಭಾರಿ ಮಳೆಯಿಂದ ಪ್ರವಾಹ-ಅನಾಹುತ!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಬಂಟ್ವಾಳ ತಾಲೂಕಿನ ಬಿ ಕಸ್ಬಾ ಗ್ರಾಮದಲ್ಲಿ ಪ್ರವಾಹ ಉಂಟಾಗಿದೆ. ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರಿಂದ ಬಿ ಕಸ್ಬಾ ಗ್ರಾಮದ ಮೀನು ಮಾರುಕಟ್ಟೆ, ದಿನಸಿ, ತರಕಾರಿ ಅಂಗಡಿಗಳೆಲ್ಲಾ ಜಲಾವೃತವಾಗಿವೆ.
ಕೊಡಗಿನಲ್ಲಿ ರೆಡ್ ಅಲರ್ಟ್!
ಕೊಡಗು ಜಿಲ್ಲಾಡಳಿತ ಮುಂದಿನ 2 ದಿನಗಳ ಕಾಲ ಕೊಡಗು ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಿ, ಗುಡ್ಡ, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದೆ. ಇದರಿಂದ ಸಧ್ಯ ಕೊಡಗು ಜಿಲ್ಲೆಯ ಜನ ಆತಂಕದಲ್ಲಿದ್ದಾರೆ.
ಉತ್ತರ ಕರ್ನಾಟಕದಲ್ಲೂ ಮಳೆ ಪ್ರವಾಹ!
ಬಾಗಲಕೋಟೆ: ಮುಧೋಳ-ಸಾಂಗ್ಲಿ ರಸ್ತೆ ಬಂದ್
ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾದ ಪರಿಣಾಮ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಇದ ಉಪ ನದಿಗಳಾದ ಘಟಪ್ರಭಾ ಮತ್ತು ಮಲಪ್ರಭಾ ನದಿಗಳು ತುಂಬಿ ಹರಿಯುತ್ತಿವೆ. ಇದರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಹಾಸನ ಜಿಲ್ಲೆಯಲ್ಲಿ ಭಾರೀ ಮಳೆ…!
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿವೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಠಸಾಗರದ ಸೇತುವೆ ಮುಳುಗಡೆಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇನ್ನು ಹೆನ್ಲಿ-ಕೃಷ್ಣಾಪುರ-ಮಠಸಾಗರ ಸಕಲೇಶಪುರ ಮಾರ್ಗದ ಸಂಪರ್ಕ ಕಡಿತವಾಗಿದೆ.
ಶಿರಾಡಿ ಘಾಟ್ನಲ್ಲಿ ಭಾರೀ ಭೂಕುಸಿತ!
ಕಳೆದ ವಾರವಷ್ಟೇ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿಯ ದೊಡ್ಡತಪ್ಲೆ ಬಳಿ ಭೂಕುಸಿತ ಸಂಭವಿಸಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಅದೇ ಜಾಗದಲ್ಲಿ ಭೂಕುಸಿತ ಸಂಭವಿಸಿದೆ. ಹಲವು ವಾಹನಗಳು ಮಣ್ಣಿನಡಿ ಸಿಲುಕಿವೆ.
ಕರ್ನಾಟಕದಾದ್ಯಂತ ಅಬ್ಬರದ ಮಳೆಯಾಗುತ್ತಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಭಾಗದ ಹಲವು ದಿನಗಳು ಉಕ್ಕಿಹರಿಯುತ್ತಿದ್ದು, ರಸ್ತೆಗಳು ಜಲಾವೃತವಾಗಿವೆ. ಇನ್ನು ನದಿಗಳ ನೀರು ಗ್ರಾಮಗಳಿಗೆ ನುಗ್ಗಿದ್ದು, ಜನರು ಕಂಗಾಲಾಗಿದ್ದಾರೆ.
ಇನ್ನು ಉತ್ತರ ಕನ್ನಡ, ಕೊಡಗು, ಕರಾವಳಿ ಭಾಗಗಳಲ್ಲಿ ಭೂಕುಸಿತ ಉಂಟಾಗಿದೆ. ಶಿರಾಡಿ ಘಾಟ್ನಲ್ಲೂ ಗುಡ್ಡ ಕುಸಿತವಾಗಿದ್ದು, ಮಂಗಳೂರು-ಬೆಂಗಳೂರು ಸಂಚಾರ ಬಂದ್ ಆಗಿದೆ. ಇನ್ನು ಕೊಡಗು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಗುಡ್ಡ, ನದಿಪಾತ್ರದಲ್ಲಿರುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.


