ಮುಡಾ ಸೈಟ್ ಹಗರಣ: ಮತ್ತೆ ವರದಿ ಕೇಳಿದ ರಾಜ್ಯಪಾಲರು!

Share It

ಬೆಂಗಳೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ಭಾರೀ ಹಗರಣ ನಡೆದಿದೆ ಎಂದು ಕೇಳಿಬಂದಿದ್ದು, ಇದೀಗ ಈ ಹಗರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊರಳಿಗೆ ಸುತ್ತಿಕೊಳ್ಳುವ ಎಲ್ಲಾ ಲಕ್ಷಣಗಳಿವೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡಲು ಚಿಂತನೆ ನಡೆಸಿದ್ದಾರೆ.

ಇದರ ಬೆನ್ನಲ್ಲೇ ಇದೀಗ ರಾಜ್ಯಪಾಲರು ಮತ್ತೆ ಮುಡಾ ಹಗರಣದ ಸಂಪೂರ್ಣ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೇಳಿದ್ದಾರೆ. ಈಗಾಗಲೇ ಸರ್ಕಾರಿಂದ ಒಂದು ಬಾರಿ ವರದಿ ಪಡೆದುಕೊಂಡಿರುವ ರಾಜ್ಯಪಾಲರು ಇದೀಗ ನವದೆಹಲಿಯಲ್ಲಿ ಇದ್ದುಕೊಂಡೇ ಮತ್ತೊಮ್ಮೆ ವರದಿ ಕೇಳಿರುವುದು ಸಂಚಲನ ಮೂಡಿಸಿದೆ.

ಮುಡಾ ಸೈಟ್​ ಹಗರಣ ಸಂಬಂಧ ಸಿಎಂ ವಿರುದ್ಧ ಖಾಸಗಿ ದೂರು ದಾಖಲಾಗಿರುವುದಿರಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಅವರು ಮತ್ತೊಮ್ಮೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಕೇಳಿದ್ದಾರೆ. ಈಗಾಗಲೇ ಅಧಿವೇಶನದ ವೇಳೆ ರಾಜ್ಯಪಾಲರಿಗೆ ಹಗರಣದ ಸಂಬಂಧ ವರದಿ ನೀಡಲಾಗಿತ್ತು. ಅಲ್ಲದೇ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ಆದ್ರೆ, ಇದೀಗ ಖಾಸಗಿ ದೂರಿನ ಅನ್ವಯ ಮತ್ತೆ ವರದಿ ಕೇಳಿದ್ದಾರೆ. ಹೀಗಾಗಿ ನೂತನ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನಿಶ್ ಅವರು ಹೆಚ್ಚಿನ ಮಾಹಿತಿ ನೀಡಲು ವರದಿ ಸಿದ್ಧಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಟಿ.ಜೆ ಅಬ್ರಾಹಂ ದೂರಿನ ಮೇರೆಗೆ ಈಗಾಗಲೇ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಬಗ್ಗೆ ಈಗಾಗಲೇ ಕಾನೂನು ಸಲಹೆ ಪಡೆದುಕೊಂಡಿದ್ದಾರೆ. ಇದರ ಮಧ್ಯ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಳಿ ಪದೇಪದೆ ಹಗರಣದ ಮಾಹಿತಿ ಕೇಳುತ್ತಿರುವುದು ಅಚ್ಚರಿಯಾಗಿದೆ. ಅದರಲ್ಲೂ ದೆಹಲಿ ಪ್ರವಾಸದಲ್ಲಿರುವಾಗಲೇ ಎರಡನೇ ಬಾರಿಗೆ ವರದಿ ಕೇಳಿರುವುದು ಅಚ್ಚರಿಗೆ ಕಾರಣವಾಗಿದೆ.

ಈ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ರಾಜಭವನದತ್ತ ನೆಟ್ಟಿದೆ.


Share It

You May Have Missed

You cannot copy content of this page