ಕಾಂಗ್ರೆಸ್‌ನಿಂದ ಬಿಜೆಪಿ ಪಾದಯಾತ್ರೆಗೆ ಕೌಂಟರ್
ಬೆಂಗಳೂರು: ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಗೆ ಕೌಂಟರ್ ಕೊಡಲು ಕಾಂಗ್ರೆಸ್ ತೀರ್ಮಾನಿಸಿದ್ದು, ಸರಕಾರದ ವತಿಯಿಂದಲೇ ಜನಾಂದೋಲನ ಕಾರ್ಯಕ್ರಮ ನಡೆಸಲು ಮುಂದಾಗಿದೆ.
ಬಿಜೆಪಿಯ ಪಾದಯಾತ್ರೆ ಶನಿವಾರದಿಂದ ಆರಂಭವಾಗಲಿದ್ದು, ಕಾಂಗ್ರೆಸ್ ಇಂದಿನಿಂದಲೇ ಜನಾಂದೋಲನ ಕಾರ್ಯಕ್ರಮ ನಡೆಸಲಿದೆ. ಮೈಸೂರು ರಸ್ತೆಯಲ್ಲಿ ಬಿಜೆಪಿ ಪಾದಯಾತ್ರೆ ಆರಂಭವಾಗುವ ಕಾರಣಕ್ಕೆ ಅವರ ಪಾದಯಾತ್ರೆಗೆ ಮೊದಲೇ, ಮೈಸೂರು ರಸ್ತೆಯ ಪ್ರಮುಖ ಪಟ್ಟಣಗಳಲ್ಲಿ ಜನಾಂದೋಲನ ಕಾರ್ಯಕ್ರಮ ನಡೆಸಲು ಸರಕಾರ ಸಿದ್ಧತೆ ಮಾಡಿಕೊಂಡಿದೆ.
ಮೈಸೂರು ರಸ್ತೆಯ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣಗಳಲ್ಲಿ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಸಚಿವರು, ಕಾರ್ಯಕ್ರಮದಲ್ಲಿ ಭಾಗವಹಿಸಿ, ಸರಕಾರದ ಸಾಧನೆಗಳನ್ನು ಮತ್ತು ಬಿಜೆಪಿ ಅವಧಿಯ ಭ್ರಷ್ಟಾಚಾರವನ್ನು ಜನರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ಬಿಡದಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಚಿವರು, ನಾಯಕರು ಮತ್ತು ಕಾರ್ಯಕರ್ತರ ಸಭೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಭಾಗವಹಿಸಲಿದ್ದು, ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಹಿರಿಯ ಸಚಿವರು, ರಾಮನಗರ ಮತ್ತು ಬೆಂಗಳೂರು ಭಾಗದ ಶಾಸಕರು ಭಾಗವಹಿಸಲಿದ್ದಾರೆ.


