ನಮ್ಮ ಮೆಟ್ರೋದಲ್ಲಿ ಮತ್ತೊಮ್ಮೆ ಭದ್ರತಾ ಲೋಪ: ಹಳಿಗೆ ಜಿಗಿದ ನಾಲ್ಕು ವರ್ಷದ ಮಗು
ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಮತ್ತೊಮ್ಮೆ ಭದ್ರತಾ ಲೋಪ ಕಂಡುಬಂದಿದ್ದು, ಮೆಟ್ರೋ ನಿಲ್ದಾಣದ ಟ್ರ್ಯಾಕ್ ಗೆ ಮಗುವೊಂದು ಜಿಗಿದ ಘಟನೆ ವರದಿಯಾಗಿದೆ.
ಬಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಮೆಟ್ರೋ ಸಿಬ್ಬಂದಿ ಭದ್ರತಾ ಲೋಪ ಕಂಡುಬಂದಿದೆ. ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ವೇಳೆ ನಾಲ್ಕು ವರ್ಷದ ಮಗುವೊಂದು ಆಟವಾಡುತ್ತುತ್ತಾ ಟ್ರ್ಯಾಕ್ ಕಡೆಗೆ ನಡೆದಿದೆ. ಆಯತಪ್ಪಿ ಟ್ರ್ಯಾಕ್ ಮೇಲೆ ಬಿದ್ದಿದ್ದು, ಕ್ಷಣಕಾಲ ಆತಂಕ ಸೃಷ್ಟಿಯಾಗಿತ್ತು.
ತಕ್ಷಣವೇ ಎಚ್ಚೆತ್ತುಕೊಂಡ ಮೆಟ್ರೋ ಸಿಬ್ಬಂದಿ, ಪವರ್ ಕಟ್ ಮಾಡುವ ಮೂಲಕ ಮಗುವಿನ ರಕ್ಷಣೆ ಮಾಡಿದರು. ಮಗು ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಪೋಷಕರು ಮತ್ತು ಅಲ್ಲಿರುವ ಭದ್ರತಾ ಸಿಬ್ಬಂದಿ ನಿರ್ಲಕ್ಷ್ಯ ದಿಂದ ಮಗುವಿನ ಪ್ರಾಣ ಅಪಾಯಕ್ಕೆ ಸಿಲುಕಿತ್ತು ಎನ್ನಲಾಗಿದೆ.
ಈ ಹಿಂದೆ ಜಯನಗರ ಮೆಟ್ರೋ ನಿಲ್ದಾಣದಲ್ಲಿ ಯುವಕನೊಬ್ಬ ಮೆಟ್ರೋ ಟ್ರ್ಯಾಕ್ ಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದ. ಈ ವೇಳೆ ಆತನೂ ಕೂಡ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.


