ಮೂಡಾ ಹಗರಣ : ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಶಿಫಾರಸು : ಆ. 4 ಕ್ಕೆ ಹೈಕಮಾಂಡ್ ಹೈವೋಲ್ಟೇಜ್ ಮೀಟಿಂಗ್ !
ಬೆಂಗಳೂರು: ಮೂಡಾ ಹಗರಣದಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಮುಂದಾಗಿದ್ದು, ಇದೀಗ ಸಿಎಂ ಸಿದ್ದರಾಮಯ್ಯ ಹುದ್ದೆಯ ಮೇಲೆ ತೂಗುಗತ್ತಿ ಬೀಸುತ್ತಿದೆ. ಈ ಸಂದರ್ಭದಲ್ಲಿ ಹೈಕಮಾಂಡ್ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲುತ್ತಾ ಅಥವಾ ಅವರನ್ನು ಕೆಳಗಿಳಿಸಲು ಮುಂದಾಗುತ್ತಾ ಎಂಬುದೀಗ ಕುತೂಹಲ ಮೂಡಿಸಿದೆ.
ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆಯುವ ಸಲುವಾಗಿ ಹೈಕಮಾಂಡ್ ರಾಜ್ಯಕ್ಕೆ ಕೆ.ಸಿ.ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರನ್ನು ಕಳುಹಿಸಿಕೊಡುತ್ತಿದೆ. ಶನಿವಾರ ರಾತ್ರಿ ರಾಜ್ಯಕ್ಕೆ ಆಗಮಿಸಲಿದ್ದು, ಭಾನುವಾರ ಸಿಎಂ ಮತ್ತು ಡಿಸಿಎಂ ಜತೆ ಸಭೆ ನಡೆಸಲಿದ್ದಾರೆ.
ಸಭೆಯಲ್ಲಿ ಮುಖ್ಯವಾಗಿ ಸಿದ್ದರಾಮಯ್ಯ ಪರವಾಗಿ ಇಡೀ ಪಕ್ಷ ನಿಲ್ಲಬೇಕಾ ಅಥವಾ ರಾಜೀನಾಮೆ ಕೊಡಿಸಿ, ಪಕ್ಷಕ್ಕಾಗುವ ಮುಜುಗರದಿಂದ ತಪ್ಪಿಸಿಕೊಳ್ಳಬೇಕಾ ಎಂಬ ಕುರಿತು ಚರ್ಚೆಯಾಗಲಿದೆ. ಒಂದು ವೇಳೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ, ಆಗಬಹುದಾದ ಬೆಳವಣಿಗೆಯ ಬಗ್ಗೆಯೂ ಮುಖಂಡರು ಚರ್ಚಿಸಲಿದ್ದಾರೆ.
ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಮೇಲಿನ ಆರೋಪ, ರಾಜ್ಯಪಾಲರ ನಿರ್ಧಾರದಿಂದ ಆಗಬಹುದಾದ ಕಾನೂನು ಸಂಕಷ್ಟದ ಕುರಿತು ಕಾನೂನು ತಜ್ಞರ ಅಭಿಪ್ರಾಯ ಪಡೆದು, ಸಿದ್ದರಾಮಯ್ಯ ಅವರನ್ನು ಮುಂದುವರಿಸುವ ಕುರಿತು ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.
ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದೆಯಾದರೆ, ನಂತರ ಮುಂದೆ ಸಿಎಂ ಯಾರು? ಡಿಕೆಶಿ ಸಿಎಂ ಮಾಡಿದರೆ ಅವರ ಮೇಲಿರುವ ಪ್ರಕರಣಗಳು ಮತ್ತೇ ತೆರೆದುಕೊಳ್ಳುತ್ತವೆ. ಅದರ ಪರಿಣಾಮ ಪಕ್ಷದ ಮೇಲೆ ಹೇಗಾಗುತ್ತದೆ ಎಂಬೆಲ್ಲ ಅಂಶಗಳನ್ನು ಹೈಕಮಾಂಡ್ ನಾಯಕರು ಗಮನಿಸುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಿ, ಅನಂತರದ ಬೆಳವಣಿಗೆಗಳಲ್ಲಿ ಮುಜುಗರ ಅನುಭವಿಸುವುದು ಎಷ್ಟು ಸರಿ ಎಂಬ ಬಗ್ಗೆ, ಅಥವಾ ಸಿದ್ದರಾಮಯ್ಯ ಅವರನ್ನೇ ಸಮರ್ಥನೆ ಮಾಡಿಕೊಳ್ಳುವುದಾದರೆ, ಶುರುವಾಗುವ ಕಾನೂನು ಸಂಘರ್ಷದ ಬಗ್ಗೆಯೆಲ್ಲ ಚರ್ಚೆ ನಡೆಯಲಿದೆ.
ಒಟ್ಟಾರೆ, ಮೂಡ ಹಗರಣದ ತೂಗುಗತ್ತಿ ಸಿದ್ದರಾಮಯ್ಯ ಅವರ ಹಿಡಿತವನ್ನು ಹೈಕಮಾಂಡ್ ಗೆ ಕೊಟ್ಟಿದ್ದು, ಅವರ ನಡೆಯೇನು ಎಂಬುದೀಗ ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ, ಮುಂದಿನ ರಾಜಕೀಯ ಹೈಡ್ರಾಮಾ ಕುತೂಹಲಕಾರಿಯಾಗಿಯೂ ಇರಲಿದೆ ಎಂದು ಹೇಳಲಾಗುತ್ತಿದೆ.


