ಬೆಂಗಳೂರು: ಬ್ಯಾಂಕ್‌ವೊಂದರಿಂದ ಪಡೆದಿರುವ ಸಾಲವನ್ನು ಮರು ಪಾವತಿಸದ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಲ್.ಆರ್.ಶಿವರಾಮೇಗೌಡ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಸಿಕ್ಕಿದೆ.
ವರ್ತೂರು ಬಳಿಯ ಶಾಲೆ ಸೇರಿದಂತೆ ವಿವಿಧ ಜಮೀನುಗಳನ್ನು ಅಡಮಾನವಿಟ್ಟು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಎಲ್.ಆರ್. ಶಿವರಾಮೇಗೌಡ ಮತ್ತು ಪಾಲುದಾರರು 32 ಕೋಟಿ ರು. ಸಾಲ ಪಡೆದಿದ್ದರು.
ಸಾಲ ಮರುಪಾವತಿಯನ್ನು ವರ್ತೂರಿನ ಅಂಬಲೀಪುರದ ಬಳಿಯಿರುವ ಶಾಲೆಯ ಬಾಡಿಗೆಯನ್ನು ಬ್ಯಾಂಕ್‌ಗೆ ಕಂತಿನ ರೂಪದಲ್ಲಿ ಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಈವರೆಗೆ ಬ್ಯಾಂಕ್ ಸಾಲವನ್ನು ಕಟ್ಟಿಲ್ಲ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಬ್ಯಾಂಕ್ ಆಡಳಿತ ಮಂಡಳಿ ಶಿವರಾಮೇಗೌಡ ಮತ್ತು ಪಾಲುದಾರರ ವಿರುದ್ಧ ವಂಚನೆ ಪ್ರಕರಣ ದಾಖಲು ಮಾಡಿತ್ತು. ಪ್ರಕರಣದಲ್ಲಿ ಬಂಧನಕ್ಕೊಳಗಾಗುವ ಭೀತಿಯಿಂದ, ಶಿವರಾಮೇಗೌಡ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದ್ದು, ಸಧ್ಯಕ್ಕಂತೂ ಶಿವರಾಮೇಗೌಡ ರಿಲೀಫ್ ಆಗಿದ್ದಾರೆ. ನಾಗಮಂಗಲದ ಮಾಜಿ ಶಾಸಕರು, ಮಂಡ್ಯದ ಮಾಜಿ ಲೋಕಸಭಾ ಸದಸ್ಯರೂ ಆಗಿರುವ ಶಿವರಾಮೇಗೌಡ ಒಮ್ಮೆ ಮಂತ್ರಿಯೂ ಆಗಿದ್ದರು.

