ಸುದ್ದಿ

ಆ.7 ರಂದು ತುಮಕೂರು ವಿವಿ 17ನೇ ವಾರ್ಷಿಕ ಘಟಿಕೋತ್ಸವ

Share It

3 ಜನರಿಗೆ ಗೌರವ ಡಾಕ್ಟರೇಟ್, 36 ಅಭ್ಯರ್ಥಿಗಳಿಗೆ ಪಿ.ಎಚ್.ಡಿ ಪ್ರಧಾನ

ತುಮಕೂರು : ತುಮಕೂರು ವಿಶ್ವವಿದ್ಯಾನಿಲಯದ 17ನೇ ವಾರ್ಷಿಕ ಘಟಿಕೋತ್ಸವ ಆ. 7ರಂದು ಬೆಳಿಗ್ಗೆ 11.3 ಗಂಟೆಗೆ ಕುಲಪತಿಗಳ ಕಚೇರಿ ಮುಂಭಾಗದ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಕುಲಪತಿ ಪ್ರೊ: ಎಂ. ವೆಂಕಟೇಶ್ವರಲು ತಿಳಿಸಿದರು.

ವಿಶ್ವ ವಿದ್ಯಾನಿಲಯದ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಮಾತನಾಡಿದ ಅವರು, ಘಟಿಕೋತ್ಸವದಲ್ಲಿ ಕ್ರೀಡೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಜಲಕ್ರೀಡಾ ಸಾಹಸಿಗ ಮತ್ತು ಸಾಮಾಜಿಕ ಕಾರ್ಯಕರ್ತ ಜಿಲ್ಲೆಯ ಸುಗ್ಗನಪಾಳ್ಯದ ಎಸ್.ಸಿ. ನಾಗಾನಂದಸ್ವಾಮಿ, ಸಮಾಜ ಸೇವಾ ವಿಭಾಗದಲ್ಲಿ  ಕೈಗಾರಿಕೋದ್ಯಮಿ ಎಚ್.ಜಿ. ಚಂದ್ರಶೇಖರ್, ಆಧ್ಯಾತ್ಮಿಕ ಮತ್ತು ಸಾಮಾಜಿಕ ಸೇವಾ ವಿಭಾಗದಲ್ಲಿ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸೇರಿ 3 ಮಂದಿಗೆ ಗೌರವ ಡಾಕ್ಟರೇಟ್ ಹಾಗೂ 36 ಅಭ್ಯರ್ಥಿಗಳಿಗೆ  ಪಿಎಚ್.ಡಿ ಪ್ರದಾನ  ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯಪಾಲರು ಹಾಗೂ ತುಮಕೂರು ವಿವಿ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯದ ಉನ್ನತ ಶಿಕ್ಷಣ ಸಚಿವ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಸಮಕುಲಾಧಿಪತಿ ಡಾ: ಎಂ.ಸಿ. ಸುಧಾಕರ್ ಉಪಸ್ಥಿತರಿರುತ್ತಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ವಿಶ್ರಾಂತ ಅಧ್ಯಕ್ಷ ಡಾ: ಎ.ಎಸ್. ಕಿರಣ್ ಕುಮಾರ್ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಈ ಬಾರಿ ಘಟಿಕೋತ್ಸವದಲ್ಲಿ 3 ಅಭ್ಯರ್ಥಿಗಳಿಗೆ ಡಿ.ಲಿಟ್ ಪದವಿ, 1758 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಹಾಗೂ 10,230 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ ಸೇರಿ ಒಟ್ಟು 11988 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಗುವುದು. ಒಟ್ಟು 74 ವಿದ್ಯಾರ್ಥಿಗಳಿಗೆ 68 ಚಿನ್ನದ ಪದಕ ಹಾಗೂ 8 ನಗದು ಬಹುಮಾನ ಪ್ರಧಾನ ಮಾಡಲಿದೆ ಎಂದರು.

ಮಾಧ್ಯಮ ಗೋಷ್ಠಿಯಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವ(ಆಡಳಿತ)ರಾದ ನಾಹಿದಾ ಜಮ್ ಜಮ್, ಕುಲಸಚಿವ(ಪರೀಕ್ಷಾಂಗ)ರಾದ ಪ್ರೊ: ಕೆ. ಪ್ರಸನ್ನಕುಮಾರ್, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥರಾದ ಸಿಬಂತಿ ಪದ್ಮನಾಭ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Share It

You cannot copy content of this page