ಬೆಂಗಳೂರು: ಮೈತ್ರಿ ಪಾದಯಾತ್ರೆ ಇನ್ನೂ ದಡಮುಟ್ಟುವ ಮೊದಲೇ ಗೊಂದಲದ ಗೂಡಾಗುವಂತೆ ಕಾಣುತ್ತಿದೆ. ಸರಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದು, ಪಾದಯಾತ್ರೆ ಆರಂಭಿಸಿದ ಮೈತ್ರಿ ಪಕ್ಷಗಳ ನಡುವಿನ ಸಮನ್ವಯದ ಕೊರತೆ ಮತ್ತೊಮ್ಮೆ ಸ್ಪೋಟಗೊಂಡಿದೆ.
ಪಾದಯಾತ್ರೆಗೆ ಮೊದಲೇ ಎಚ್ ಡಿ. ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ಕೊಡುವುದಿಲ್ಲ ಎಂದಿದ್ದರು. ಅದಕ್ಕವರು, ಪ್ರೀತಂ ಗೌಡ ತಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯದ ಕಾರಣವನ್ನು ನೀಡಿದ್ದರು. ಕೊನೆಗೆ ಬಿಜೆಪಿ ಹೈಕಮಾಂಡ್ ಮಾತಿಗೆ ಮಣಿದು ಮೈತ್ರಿ ಪಾದಯಾತ್ರೆಗೆ ಕೈಜೋಡಿಸಿದ್ದರು. ಇದೀಗ ಮೈತ್ರಿ ನಡುವಿನ ಬಿರುಕು ಬಹಿರಂಗವಾಗಿದೆ.
ಪಾದಯಾತ್ರೆ ಮಂಡ್ಯ ತಲುಪುತ್ತಿದ್ದಂತೆ ಪ್ರತಿಷ್ಠೆಯ ಪರಾಕಾಷ್ಠೆ ಹೆಚ್ಚಾಗುತ್ತಿದೆ. ಮಂಡ್ಯ ಜೆಡಿಎಸ್ ಭದ್ರಕೋಟೆ ಎಂದು ಬೀಗುತ್ತಿದ್ದರೆ, ಬಿಜೆಪಿ ಕಾರ್ಯಕರ್ತರು ತಾವೇನು ಕಡಿಮೆಯಿಲ್ಲ ಎಂದುಕೊಳ್ಳುತ್ತಿದ್ದಾರೆ. ಈ ನಡುವೆ ಪ್ರೀತಂ ಗೌಡ ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರು ಕಿತ್ತಾಡಿಕೊಂಡಿರುವ ಘಟನೆ ವರದಿಯಾಗಿದೆ.
ಪ್ರೀತಂ ಗೌಡ ಬೆಂಬಲಿಗರು ಪ್ರೀತಂ ಗೌಡಗೆ ಜೈಕಾರ ಹಾಕಿದ್ದಾರೆ. ಇದರಿಂದ ರೊಚ್ಚಿಗೆದ್ದ ಜೆಡಿಎಸ್ ಕಾರ್ಯಕರ್ತರು ದೇವೇಗೌರಿಗೆ ಮತ್ತು ಕುಮಾರಸ್ವಾಮಿ ಅವರಿಗೆ ಜೈಕಾರ ಹಾಕಿಕೊಂಡು, ಪ್ರೀತಂ ಗೌಡ ಬೆಂಬಲಿಗರ ಮೇಲೆ ಮುಗಿಬಿದ್ದಿದ್ದಾರೆ. ಇದು ಕೆಲ ಕಾಲ ಪಾದಯಾತ್ರೆಯಲ್ಲಿ ಗೊಂದಲ ಮೂಡಿಸಿದೆ.
ಮಂಡ್ಯದಲ್ಲಿ ಈ ಘಟನೆ ನಡೆದಿದ್ದು ಬಿಜೆಪಿ ನಾಯಕರನ್ನು ಕಂಗೆಡಿಸಿದೆ. ಪಾದಯಾತ್ರೆ ಪೂರ್ಣಗೊಳಿಸುವವರೆಗೆ ಮೈತ್ರಿ ಜತೆ ಹೊಂದಾಣಿಕೆಯಿಂದ ಹೋಗಬೇಕೆಂಬ ನಾಯಕರ ಆಸೆಗೆ ಕಾರ್ಯಕರ್ತರು ತಣ್ಣೀರು ಹಾಕಿದ್ದಾರೆ. ಇದು ಮೈಸೂರು ತಲುಪುವಷ್ಟರಲ್ಲಿ ಏನೇನು ಅವಾಂತರಗಳಿಗೆ ಕಾರಣವಾಗುತ್ತದೆಯೋ ಕಾದು ನೋಡಬೇಕಿದೆ.