ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಪ್ರವಾಸಿ ಭಾರತ ವಿರುದ್ಧ 110 ರನ್ ಗಳಿಂದ ಗೆದ್ದು ತ್ರಿಕೋನ ಏಕದಿನ ಸರಣಿಯನ್ನು 2-0 ಯಿಂದ ವಶಪಡಿಸಿಕೊಂಡಿದೆ.
ಇದರೊಂದಿಗೆ ಪ್ರವಾಸಿ ಟೀಂ ಇಂಡಿಯಾ ಇತ್ತೀಚೆಗೆ ವೆಸ್ಟ್ ಇಂಡೀಸ್-ಅಮೆರಿಕಾ ದೇಶಗಳಲ್ಲಿ ನಡೆದಿದ್ದ 2024 ರ ಟಿ-20 ವಿಶ್ವಕಪ್ ಟಿ-20 ಟ್ರೋಫಿಯನ್ನು ಗೆದ್ದ ನಂತರ ಪ್ರವಾಸಿ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಹೀನಾಯ ಸೋಲು ಕಂಡು ಮಂಕಾಗಿದೆ.
ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಹಂತದಲ್ಲಿ ಕೈಚೆಲ್ಲಿ ಲಂಕಾದೊಂದಿಗೆ ಪಂದ್ಯ ಟೈ ಮಾಡಿಕೊಂಡಿತ್ತು.
ಬಳಿಕ 2ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ ಸಾಧಾರಣ ಗೆಲುವಿನ ಗುರಿ ತಲುಪಲಾರದೆ ಟೀಂ ಇಂಡಿಯಾ ಸೋಲು ಕಂಡಿತು. ಆದರೆ 3ನೇ ನಿರ್ಣಾಯಕ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ಎಚ್ಚೆತ್ತುಕೊಳ್ಳದೆ ಮತ್ತದೇ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ಶ್ರೀಲಂಕಾ ನೀಡಿದ್ದ ಸಾಧಾರಣ ಟಾರ್ಗೆಟ್ ಅನ್ನು ತಲುಪಲಾಗದೆ ಹೀನಾಯ ಬ್ಯಾಟಿಂಗ್ ಪ್ರದರ್ಶಿಸಿ ಪಂದ್ಯ ಸೋತು ಸರಣಿ ಕಳೆದುಕೊಂಡಿದೆ.
ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಲಂಕಾದ ಓಪನರ್ ಗಳಾದ ನಿಸ್ಸಾಂಕಾ ಮತ್ತು ಅವಿಷ್ಕಾ ಫರ್ನಾಂಡೊ ಬಿರುಸಿನ ಬ್ಯಾಟಿಂಗ್ ನಡೆಸಿದರು. ಮೊದಲ ವಿಕೆಟ್ ಜೊತೆಯಾಟಕ್ಕೆ ಇವರಿಬ್ಬರು 89 ರನ್ ಸೇರಿಸಿದರು. ನಿಸ್ಸಾಂಕಾ 45 ರನ್ ಗಳಿಸಿ ಔಟಾದರು. ನಂತರ ಕುಸಾಲ್ ಮೆಂಡಿಸ್ ಮತ್ತು ಫರ್ನಾಂಡೊ ಸ್ಕೋರ್ ಅನ್ನು 171 ರನ್ ವರೆಗೆ ಕೊಂಡೊಯ್ದರು. ಆದರೆ ಫರ್ನಾಂಡೊ 96 ರನ್ ಗಳಿಸಿ ಔಟಾದರು.
ಬಳಿಕ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಲಂಕಾಕ್ಕೆ ಕುಸಾಲ್ ಮೆಂಡಿಸ್ 59 ರನ್ ಗಳಿಸಿ ಆಸರೆಯಾದರು. ಕೊನೆಯಲ್ಲಿ ಕಾಮಿಂದು ಮೆಂಡಿಸ್ ಅಜೇಯ 23 ರನ್ ಹೊಡೆದು ಸ್ಕೋರ್ ಅನ್ನು 248 ರನ್ ಗಳಿಗೆ ಮುಟ್ಟಿಸಿದರು. ಟೀಂ ಇಂಡಿಯಾ ಪರ ಯುವ ಸ್ಪಿನ್ನರ್ ರಿಯಾನ್ ಪರಾಗ್ 3 ವಿಕೆಟ್ ಗಳಿಸಿದರು.
ಬಳಿಕ ಸಾಧಾರಣ ಗೆಲುವಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರೂ ಇನ್ನೊಂದೆಡೆ ಓಪನರ್ ಗಿಲ್ ಔಟಾದರು. ಬಳಿಕ ಬಂದ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ನಡೆಸಿದರೂ ರೋಹಿತ್ ಶರ್ಮಾ 35 ರನ್ ಗಳಿಸಿ ಔಟಾದರು. ನಂತರ ರಿಷಭ್ ಪಂತ್ ಕೂಡ ಬೇಗನೆ ಪೆವಿಲಿಯನ್ ಸೇರಿಕೊಂಡರು.
ತದನಂತರ ಕೊಹ್ಲಿ 20 ರನ್ ಹೊಡೆದು ಔಟಾದರು. ಬಳಿಕ ಟೀಂ ಇಂಡಿಯಾ ಸೋಲಿನ ದವಡೆಗೆ ಸಿಲುಕಿ ಒದ್ದಾಡಿತು. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ ಹೋರಾಡಿ 30 ರನ್ ಗಳಿಸಿದರು. ಆದರೆ ಶ್ರೀಲಂಕಾ ಸ್ಪಿನ್ನರ್ ದುನಿತ್ ವೆಲ್ಲಲಾಗೆ ಹಾಗೂ ಜೆಫ್ರಿ ವಾಂಡರ್ಸೆ ಅವರ ಸ್ಪಿನ್ ದಾಳಿಗೆ ಸಿಲುಕಿ ಟೀಂ ಇಂಡಿಯಾ ಕೇವಲ 26.1 ಓವರ್‌ಗಳಲ್ಲೇ 138 ರನ್ ಗಳಿಸಿ ಆಲೌಟ್ ಆಯಿತು. ಲಂಕಾ ಪರ ಸ್ಪಿನ್ನರ್ ಗಳಾದ ದುನಿತ್ ವೆಲ್ಲಲಾಗೆ 5 ವಿಕೆಟ್ ಹಾಗೂ ಜೆಫ್ರಿ ವಾಂಡರ್ಸೆ 2 ವಿಕೆಟ್ ಕಿತ್ತು ಟೀಂ ಇಂಡಿಯಾ ಸರಣಿ ಸೋಲಿಗೆ ಕಾರಣರಾದರು.
ಹೀಗಾಗಿ ಆತಿಥೇಯ ಶ್ರೀಲಂಕಾ ತಂಡ 3ನೇ ನಿರ್ಣಾಯಕ ಏಕದಿನ ಪಂದ್ಯವನ್ನು 110 ರನ್ ಗಳಿಂದ ಜಯಿಸಿ ತ್ರಿಕೋನ ಏಕದಿನ ಸರಣಿಯನ್ನು 2-0 ಯಿಂದ ಗೆದ್ದು ಬೀಗಿತು.1997 ರ ನಂತರ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಸೋತು ತವರಿಗೆ ಮರಳುವಂತಾಗಿದೆ.
ಅಮೂಲ್ಯ 96 ರನ್ ಗಳಿಸಿದ ಶ್ರೀಲಂಕಾದ ಓಪನರ್ ಅವಿಷ್ಕಾ ಫರ್ನಾಂಡೊ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಗಳಿಸಿದರು.