ಬೆಂಗಳೂರು: ಒಲಂಪಿಕ್ಸ್ ನಲ್ಲಿ ಪದಕ ಕೈತಪ್ಪಿದ ಕಾರಣದಿಂದ ನೊಂದಿರುವ ವಿನೇಶ್ ಪೋಗಟ್ ತಮ್ಮ ಅಂತಾರಾಷ್ಟ್ರೀಯ ಕುಸ್ತಿ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಬರೆದುಕೊಂಡಿರುವ ಅವರು, ತಮ್ಮ ವೃತ್ತಿ ಜೀವನವನ್ನು ಕೊನೆಗೊಳಿಸುವ ನಿರ್ಧಾರ ಪ್ರಕಟ ಮಾಡಿದ್ದಾರೆ. ಆ ಮೂಲಕ ಪದಕ ಕಳೆದುಕೊಂಡ ಶಾಕ್ ನಲ್ಲಿದ್ದ ಭಾರತೀಯ ಕ್ರೀಡಾ ಅಭಿಮಾನಿಗಳಿಗೆ ಮತ್ತೊಂದು ಶಾಕ್ ನೀಡಿದ್ದಾರೆ.
ಅವರು ತಮ್ಮ ಸಂದೇಶದಲ್ಲಿ ಅಮ್ಮಾ ಕಸ್ತಿಯ ಮುಂದೆ ನಾನು ಸೋತಿದ್ದೇನೆ. ಇನ್ನು ಮುಂದೆ ನನಗೆ ಹೋರಾಡುವ ಶಕ್ತಿಯಿಲ್ಲ, ಕ್ಷಮಿಸಿಬಿಡು ಎಂದು ಬರೆದುಕೊಂಡಿದ್ದಾರೆ. ಜತೆಗೆ ಈವರೆಗೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.
ಭರ್ಜರಿ ಪ್ರದರ್ಶನದ ಮೂಲಕ ಫೈನಲ್ ಪ್ರವೇಶ ಮಾಡಿದ್ದ ವಿನೇಶ್ ಪೋಗಟ್ ಭಾರತಕ್ಕೆ ಚಿನ್ನದ ಪದಕ ತಂದುಕೊಡುವ ಆಶಾಕಿರಣವಾಗಿದ್ದರು. ಆದರೆ, 100 ಗ್ರಾಂ ಹೆಚ್ವು ತೂಕ ಹೊಂದಿದ್ದಾರೆ ಎಂಬ ಕಾರಣ ನೀಡಿ ಅವರನ್ನು ಒಲಂಪಿಕ್ಸ್ ನಿಂದ ಹೊರಹಾಕಲಾಗಿದೆ. ಜತೆಗೆ, ಬೆಳ್ಳಿ ಪದಕಕ್ಕೂ ಅರ್ಹತೆಯಿಲ್ಲದಂತೆ ಮಾಡಿ, ಕೊನೆಯ ಸ್ಥಾನ ನೀಡಲಾಗಿದೆ.
ಇದರಿಂದ ಸಹಜವಾಗಿಯೇ ವಿನೇಶ್ ಪೋಗಟ್ ನೊಂದಿದ್ದು, ಭಾವನಾತ್ಮಕ ಸಂದೇಶದೊಂದಿಗೆ ಕುಸ್ತಿಗೆ ವಿದಾಯ ಹೇಳಿದ್ದಾರೆ. ಈ ನಡುವೆ ಅವರು ಆಸ್ಪತ್ರೆ ಸೇರಿದ್ದು, ಪಿ.ಟಿ.ಉಷಾ ಸೇರಿದಂತೆ ಅನೇಕರು ಭೇಟಿಯಾಗಿ ಧೈರ್ಯ ತುಂಬಿದ್ದಾರೆ.