ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಜತೆ ಸಂಪರ್ಕದಲ್ಲಿದ್ದ ನಟ ಚಿಕ್ಕಣ್ಣ ಅವರ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲು ಮಾಡಲಾಗಿದೆ.
ನಟ ಚಿಕ್ಕಣ್ಣನನ್ನು ೪೨ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ಚಿಕ್ಕಣ್ಣ ಪೊಲೀಸರ ಮುಂದೆ ಹೇಳಿರುವ ಹೇಳಿಕೆಯನ್ನು ದಾಖಲು ಮಾಡಿಸಿದ್ದಾರೆ. ಸೆಕ್ಷನ್ ಸಿಆರ್‌ಪಿಸಿ-164 ರ ಅಡಿಯಲ್ಲಿ ಹೇಳಿಕೆ ದಾಖಲು ಮಾಡಲಾಗಿದೆ.
ನಟ ಚಿಕ್ಕಣ್ಣ ರೇಣುಕಾ ಸ್ವಾಮಿ ಕೊಲೆಯಾದ ದಿನ ದರ್ಶನ್ ಮತ್ತು ಇತರೆ ಆರೋಪಿಗಳ ಜತೆ ಕಾಣಿಸಿಕೊಂಡಿದ್ದರು. ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ನಡೆದ ಪಾರ್ಟಿಯಲ್ಲಿ ದರ್ಶನ್, ವಿನಯ್ ಮತ್ತು ಪ್ರದೋಷ್ ಜತೆ ಸೇರಿ ಪಾರ್ಟಿ ಮಾಡಿದ್ದರು. ಆದರೆ, ಆರೋಪಿಗಳ ಜತೆಗೆ ರೇಣುಕಾ ಸ್ವಾಮಿ ಕೊಲೆಯಾದ ಪಟ್ಟಣಗೆರೆ ಶೆಡ್‌ಗೆ ತೆರಳದೆ ಮನೆಗೆ ಹೋಗಿದ್ದರು.
ಈ ಸಂಬಂಧ ಪೊಲೀಸರು ಚಿಕ್ಕಣ್ಣ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಚಿಕ್ಕಣ್ಣ ಕೆಲವು ಮಹತ್ವದ ಸಾಕ್ಷ್ಯಗಳನ್ನು ಹೇಳಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ಜತೆ ಸಂಪರ್ಕದಲ್ಲಿದ್ದ ಸಾಕ್ಷಿಗಳನ್ನು ನ್ಯಾಯಾಧೀಶರ ಮುಂದೆಯೇ ಹೇಳಿಕೆ ದಾಖಲಿಸಿ, ಮುಂದೆ ಉಲ್ಟಾ ಹೊಡೆಯದಂತೆ ಮಾಡುವ ಉದ್ದೇಶದಿಂದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.