ಬಾಂಗ್ಲಾ ದೇಶದಲ್ಲಿನ ಹಿಂದುಗಳ ಮೇಲಿನ ದೌರ್ಜನ್ಯಕ್ಕೆ ಬಾಂಗ್ಲಾದೇಶದ ನೂತನ ಗೃಹ ಸಚಿವ ಶೇಖಾವತ್ ಹೊಸೈನ್ ಕ್ಷಮೆ ಕೋರಿದ್ದಾರೆ. ಅವರು ಬಾಂಗ್ಲಾ ದೇಶದಲ್ಲಿರುವ ಅಲ್ಪಾ ಸಂಖ್ಯಾತರಾದ ಹಿಂದೂಗಳನ್ನು ರಕ್ಷಿಸುವುದು ಮುಸ್ಲಿಂ ಬಹುಸಂಖ್ಯಾತರ ಕರ್ತವ್ಯ, ಆ ಹೊಣೆಗಾರಿಕೆ ನಿಭಾಯಿಸುವಲ್ಲಿ ನಾವು ವಿಫಲರಾಗಿದ್ದೇವೆ. ಭವಿಷ್ಯದಲ್ಲಿ ಹಿಂದುಗಳಿಗೆ ರಕ್ಷಣೆ ಒದಗಿಸುವ ಭರವಸೆ ನೀಡಿ, ಪರಿಸ್ಥಿತಿ ಸುಧಾರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾ ದೇಶದಲ್ಲಿನ ಹಿಂದುಗಳ ಬೃಹತ್ ಪ್ರತಿಭಟನೆಯ ನಂತರ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಹಿಂದುಗಳ ಮೇಲೆ ದಾಳಿಗೆ ಕಾರಣರಾದವರನ್ನು ಸರ್ಕಾರ ಶಿಕ್ಷೆಗೊಳಪಡಿಸಲಿದೆ ಎಂದು ಸಂಕಷ್ಟದಲ್ಲಿರುವ ಹಿಂದು ಸಮುದಾಯದವರನ್ನು ಮಂಗಳವಾರ ಭೇಟಿಯಾಗಿ ಭರವಸೆ ನೀಡಿದ್ದಾರೆ.
ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಗುರುವಾರ ಅಧಿಕಾರ ಸ್ವೀಕರಿಸಿದ ಬಳಿಕ ಢಾಕೇಶ್ವರಿ ರಾಷ್ಟ್ರೀಯ ದೇವಸ್ಥಾನಕ್ಕೆ ಭೇಟಿ ನೀಡಿದರು, ಸರ್ಕಾರ ಈ ಬಗ್ಗೆ ನಿಲುವು ತೆಗೆದುಕೊಳ್ಳುವವರೆಗೆ ತಾಳ್ಮೆಯಿಂದ ಎಲ್ಲರೂ ಇರುವಂತೆ ಕೋರಿದರು, ಹಕ್ಕುಗಳು ಎಲ್ಲರಿಗೂ ಒಂದೇ. ನಮ್ಮ ಮಧ್ಯೆ ಯಾವುದೇ ಭೇದ ಭಾವ ಮಾಡಬೇಡಿ. ತಾಳ್ಮೆಯಿಂದ ಇರುವ ಮೂಲಕ ಸರ್ಕಾರಕ್ಕೆ ಸಹಾಯ ಮಾಡಿ, ನಮಗೆ ಏನು ಮಾಡಲು ಸಾಧ್ಯವಾಯಿತು ಏನು ಮಾಡಬೇಕು ಎಂಬುದನ್ನು ನಿರ್ಣಯಿಸಿ ಬಿಡಿ, ನಾವು ವಿಫಲರಾದರೆ ನಂತರ ನಮ್ಮನ್ನು ಟೀಕಿಸಿ ಎಂದರು.
ಸರ್ಕಾರದ ಧಾರ್ಮಿಕ ವ್ಯವಹಾರಗಳ ಸಲಹೆಗಾರ ಎಎಫ್‌ಎಂ ಖಾಲಿದ್ ಹೊಸೈನ್ ಅಲ್ಪಸಂಖ್ಯಾತರಿಗೆ ಸೇರಿದ ಧಾರ್ಮಿಕ ಸಂಸ್ಥೆಗಳ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಅಲ್ಪಸಂಖ್ಯಾತರ ಸಮುದಾಯಗಳಿಗೆ ಬೆಂಬಲದ ಭರವಸೆ ನೀಡಲಾಗಿದೆ.ಅಲ್ಪಸಂಖ್ಯಾತರ ಮನೆ ಮತ್ತು ಧಾರ್ಮಿಕ ಸ್ಥಳಗಳ ಮೇಲೆ ದಾಳಿಗಳು ನಡೆಯುತ್ತಿರುವ ಕುರಿತು ದೂರುಗಳು ಬಂದಿದ್ದು, ಡೆಪ್ಯುಟಿ ಕಮಿಷನರ್ ಗಳು ಹಾನಿಯ ಮಾಹಿತಿಗಳನ್ನು ಕ್ರೋಡೀಕರಿಸುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.