ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರಾಜೀನಾಮೆಗೆ ಬಿಜೆಪಿ ಶಾಸಕರಿಂದಲೇ ಒತ್ತಾಯ ವ್ಯಕ್ತವಾಗಿರುವ ವಿಚಾರ ಈಗಾಗಲೇ ಬಹಳ ಚರ್ಚೆ ಆಗಿದೆ. ಶಾಸಕರ ಹೇಳಿಕೆಯನ್ನು ಕೇಂದ್ರದ ನಾಯಕರು ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಅವರು ನಿಲುವು ತೆಗೆದುಕೊಳ್ಳುವ ವಿಶ್ವಾಸವಿದೆ. ನಾನೂ ಸಹ ಸಮಯ ನೋಡಿ ದೆಹಲಿ ನಾಯಕರ ಭೇಟಿಯಾಗುತ್ತೇನೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಬೆಂಗಳೂರಿನಲ್ಲಿ ಹೇಳಿಕೆ ನೀಡಿದ ಅವರು, ರಾಜ್ಯದ ಬಿಜೆಪಿ ಬೆಳವಣಿಗೆಗಳ ಬಗ್ಗೆ ವರಿಷ್ಠರ ಗಮನಕ್ಕೆ ತರುತ್ತೇನೆ. ಶೀಘ್ರದಲ್ಲೇ ಒಂದು ಪರಿಹಾರ ಕೊಡಿ ಎಂದು ವಿನಂತಿ ಮಾಡುತ್ತೇನೆ. ಇದನ್ನು ನಾನು ದೆಹಲಿಗೆ ಹೋದ ಸಂದರ್ಭದಲ್ಲಿ ಹೇಳುತ್ತೇನೆ ಎಂದರು.
ಬಿಜೆಪಿ ಬೆಳವಣಿಗೆ ಬಗ್ಗೆ ಆರ್ಎಸ್ಎಸ್ ಸಭೆ ನಡೆಸುವ ವಿಚಾರ ನನ್ನ ಗಮನದಲ್ಲಿ ಇಲ್ಲ. ಆರ್ಎಸ್ಎಸ್ ಯಾವುದೇ ಸಂದರ್ಭದಲ್ಲಿ ರಾಜಕಾರಣ ಮಾಡಲ್ಲ. 40 ವರ್ಷದ ಹಿಂದೆಯೇ ನಾನು ಆರ್ಎಸ್ಎಸ್ ಚಡ್ಡಿ ಹಾಕಿದವನು. ಆರ್ಎಸ್ಎಸ್ನ ನೀತಿ, ನಿಯಮ ಎಲ್ಲವೂ ನನಗೂ ಗೊತ್ತಿದೆ. ಆರ್ಎಸ್ಎಸ್ ರಾಜಕಾರಣದಲ್ಲಿ ಭಾಗವಹಿಸುವುದು ಗೊತ್ತಿಲ್ಲ ಎಂದರು.
ಇದೇ ವೇಳೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಶಾಸಕರ ಅನುದಾನಕ್ಕೆ ಕತ್ತರಿ ಬಿದ್ದಿದೆ ಎಂದು ಆಪಾದಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಇದಕ್ಕೆ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಸಾರಿಗೆ ಬಸ್ ಗಳಲ್ಲಿ ಉಚಿತ ಬಸ್ ಪ್ರಯಾಣ ಅವಕಾಶ ನೀಡಿ, ಬೆಳಗ್ಗೆ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್ ಸಿಗದೆ ಬಹಳ ತೊಂದರೆಯಾಗಿದೆ.
ಜೊತೆಗೆ ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಸೌಲಭ್ಯ ಇದೀಗ ಎಲ್ಲರಿಗೂ ಸಿಗುತ್ತಿಲ್ಲ, ಬಹಳಷ್ಟು ಮನೆಗಳಿಗೆ ಈಗ ಕರೆಂಟ್ ಬಿಲ್ ಕೊಡಲಾಗಿದೆ. ಇದರಿಂದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿಗೆ ಬಂದಿಲ್ಲ, ಜೊತೆಗೆ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡಲು ವಿಫಲವಾಗಿದೆ ಎಂದು ಆರೋಪಿಸಿದರು.
ಇದೇ ವೇಳೆ ಗೃಹಲಕ್ಷ್ಮೀ ಯೋಜನೆಯ ಹಣವೂ ಬಿಪಿಎಲ್ ಕಾರ್ಡ್ ಇದ್ದ ಮನೆಗಳ ಗೃಹಿಣಿಯರಿಗೆ ತಲುಪುತ್ತಿಲ್ಲ. ಎಲ್ಲೋ ಒಂದಿಷ್ಟು ಕಡೆ ಗೃಹಲಕ್ಷ್ಮೀ ಯೋಜನೆಯ ಹಣ ಗೃಹಿಣಿಯರಿಗೆ ಕೊಡುವ ಹಾಗೆ ಕಾಂಗ್ರೆಸ್ ಸರ್ಕಾರ ನಾಟಕವಾಡುತ್ತಿದೆಯಷ್ಟೇ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಗಂಭೀರವಾಗಿ ಆರೋಪಿಸಿದರು.