ಅಪರಾಧ ಸಿನಿಮಾ ಸುದ್ದಿ

ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ ಅಂಡ್ ಗ್ಯಾಂಗ್ ಕೋರ್ಟ್ ಕಸ್ಟಡಿ‌ ವಿಸ್ತರಣೆ

Share It

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನ ಎಲ್ಲ ಆರೋಪಿಗಳಿಗೆ ನಿರೀಕ್ಷೆಯಂತೆ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ.

ಈ ಹಿಂದೆ ಆಗಸ್ಟ್ 14 ರವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ನೀಡಲಾಗಿತ್ತು. ಇಂದು ಆಗಸ್ಟ್ 14 ಬುಧವಾರ ಮಧ್ಯಾಹ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ನಟ ದರ್ಶನ್ ಮತ್ತು ಪ್ರಕರಣದ ಇತರೆ ಆರೋಪಿಗಳನ್ನು 24ನೇ ಎಸಿಎಂಎಂ ಇನ್ಚಾರ್ಜ್ ಕೋರ್ಟ್​ ಎದುರು ಹಾಜರುಪಡಿಸಲಾಯ್ತು. ಪೊಲೀಸರ ರಿಮ್ಯಾಂಡ್ ಅರ್ಜಿಯನ್ನು ಪುರಸ್ಕರಿಸಿದ ಮ್ಯಾಜಿಸ್ಟ್ರೇಟರು, ಪ್ರಕರಣದ ಎಲ್ಲ ಆರೋಪಿಗಳಿಗೂ ಆಗಸ್ಟ್ 28ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ನೀಡಿದರು.

ಬೆಂಗಳೂರು ಜೈಲಿನಲ್ಲಿರುವ ಆರೋಪಿಗಳು ಹಾಗೂ ತುಮಕೂರು ಜೈಲಿನಲ್ಲಿರುವ ಮೂವರು ಆರೋಪಿಗಳನ್ನು ಪೊಲೀಸರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಹಾಜರುಪಡಿಸಿದ್ದರು. ಈ ಸಮಯದಲ್ಲಿ ಪೊಲೀಸರು, ಎಲ್ಲ ಆರೋಪಿಗಳಿಗೂ ನ್ಯಾಯಾಂಗ ಬಂಧನ ವಿಸ್ತರಿಸುವಂತೆ ಮನವಿ ಮಾಡಿದರು. ಮನವಿ ಪುರಸ್ಕರಿಸಿದ ನ್ಯಾಯಾಧೀಶ ಜಡ್ಜ್ ವಿಶ್ವನಾಥ್ ಸಿ. ಗೌಡರ್ ಅವರು ಎಲ್ಲ ಆರೋಪಿಗಳಿಗೂ ಆಗಸ್ಟ್ 28ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದರು. ಆರೋಪಿಗಳಿಗೆ ಪುನಃ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲು ಪೊಲೀಸರು ಎಂಟು ಕಾರಣಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ.

ದರ್ಶನ್ ಹಾಗೂ ಸಂಗಡಿಗರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರೆ ಮೂವರು ಆರೋಪಿಗಳನ್ನು ಮಾತ್ರ ಇವರಿಂದ ದೂರಾಗಿ ತುಮಕೂರು ಜೈಲಿನಲ್ಲಿ ಪೊಲೀಸರು ಇರಿಸಿದ್ದಾರೆ. ಈ ಮೂವರು ಆರೋಪಿಗಳು ಅಪ್ರೂವರ್​ಗಳಾಗಿ ಬದಲಾಗಿದ್ದು ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಹಾಗೂ ಇತರರ ಪಾತ್ರದ ಬಗ್ಗೆಯೂ ವಿವರವಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಉಳಿದ ಆರೋಪಿಗಳಿಂದ ದೂರಾಗಿ ಇವರನ್ನು ತುಮಕೂರಿನಲ್ಲಿ ಇರಿಸಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 11 ರಂದು ನಟ ದರ್ಶನ್, ಪವಿತ್ರಾ ಗೌಡ ಇನ್ನೂ ಹಲವರನ್ನು ಪೊಲೀಸರು ಬಂಧಿಸಿದ್ದರು. ದರ್ಶನ್ ಮತ್ತು ಇತರೆ ಆರೋಪಿಗಳು ಪ್ರಕರಣದಲ್ಲಿ ಬಂಧನಕ್ಕೆ ಒಳಪಟ್ಟು 2 ತಿಂಗಳಿಗೂ ಹೆಚ್ಚು ಸಮಯವಾಗಿದೆ. ಆದರೆ ಪ್ರಕರಣದ ಸ್ವರೂಪ ಗಂಭೀರವಾಗಿರುವ ಕಾರಣ ಆರೋಪಿಗಳಿಗೆ ಜಾಮೀನು ಸಿಗುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ. ಕನಿಷ್ಟ ಇನ್ನೂ ಒಂದು ಗರಿಷ್ಠ 6 ತಿಂಗಳುಗಳ ಕಾಲ ದರ್ಶನ್​ಗೆ ಜಾಮೀನು ಸಿಗುವುದಿಲ್ಲ ಎಂದು ಕೆಲವು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


Share It

You cannot copy content of this page