ಅಪರಾಧ ಸಿನಿಮಾ ಸುದ್ದಿ

ದರ್ಶನ್ ಬಂಧನ ಪ್ರಕರಣ : FSL ವರದಿಗಾಗಿ ಕಾಯುತ್ತಿರುವ ಪೊಲೀಸರು

Share It

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಚಾರ್ಜ್ ಶೀಟ್ ಯಾವಾಗ ಸಲ್ಲಿಸುತ್ತಾರೆ? ತನಿಖೆ ಯಾವ ಹಂತದಲ್ಲಿದೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಮಾತನಾಡಿದ್ದಾರೆ.

‘ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತಿಮ ಘಟ್ಟ ತಲುಪುತ್ತಿದೆ. ಅನೇಕ ಮೌಖಿಕ ಸಾಕ್ಷ್ಯಗಳು, ಸಾಂದರ್ಭಿಕ ಸಾಕ್ಷ್ಯಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ತಂಡ ಸಂಗ್ರಹಿಸಿದೆ. ನಾವು ಸಂಗ್ರಹಿಸಿರುವ ಸಾಂದರ್ಭಿಕ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಬೆಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯದ ಜತೆಗೆ ಹೈದರಾಬಾದ್​ ಪ್ರಯೋಗಾಲಯಕ್ಕೂ ಕೆಲ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳಿಸಿ ವರದಿ ಪಡೆಯಲಾಗುತ್ತಿದೆ’ ಎಂದಿದ್ದಾರೆ.

‘ಹೀಗೆ ವಿಧಿ ವಿಜ್ಞಾನ ಪ್ರಯೋಗಾಲಯಗಳಿಗೆ ಕಳಿಸಲಾಗಿದ್ದ ಕೆಲ ವರದಿ ನಮ್ಮ ಕೈಸೇರಿದ್ದು, ಇನ್ನೂ ಕೆಲ ವರದಿ ಬರಬೇಕಿದೆ. ವರದಿ ಕೈ ಸೇರಿದ ನಂತರ. ತನಿಖೆಯ ಮುಂದಿನ ಭಾಗವಾಗಿ ಕೆಲ ಸ್ಪಷ್ಟೀಕರಣ ಕೇಳುವ ಅವಶ್ಯಕತೆ ಇದ್ದರೆ ಸ್ಪಷ್ಟೀಕರಣ ಕೇಳಿ, ಆದಷ್ಟು ಬೇಗ ತನಿಖೆ ಅಂತಿಮ ವರದಿ ಸಲ್ಲಿಸುತ್ತೇವೆ ಎಂದರು.

‘ಎಷ್ಟು ಸಾಕ್ಷ್ಯಗಳನ್ನು ಒಟ್ಟು ಮಾಡಿದ್ದೇವೆ ಎಂಬ ಸಂಖ್ಯೆ ನಮ್ಮ ಬಳಿ ಇಲ್ಲ. ಆದರೆ, ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದ ವರದಿಗಳಲ್ಲಿ 70% ವರದಿ‌ ಸಿಕ್ಕಿದೆ. ಹೈದರಾಬಾದ್​ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಎಲೆಕ್ಟ್ರಿಕ್ ಡಿವೈಸ್​ (ಮೊಬೈಲ್) ಗಳ ವರದಿ ಬಂದಿಲ್ಲ, ಅದಕ್ಕಾಗಿ ಕಾಯುತ್ತಿದ್ದೇವೆ’ ಎಂದಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಜೂನ್ 9 ರಂದು ನಡೆದಿತ್ತು. ಜೂನ್ 10 ರಂದು ಮೃತದೇಹ ಪತ್ತೆಯಾಗಿತ್ತು. ಅದೇ ದಿನ ಮೂವರು, ಕೊಲೆ ಒಪ್ಪಿಕೊಂಡು ಶರಣಾಗಿದ್ದರು. ಅನುಮಾನ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಹಾಗೂ ಇತರರು ಭಾಗಿಯಾಗಿರುವುದು ಗೊತ್ತಾಗಿತ್ತು.

ಜೂನ್ 11 ರಂದು ಬೆಳಿಗ್ಗೆ ಮೈಸೂರಿನಲ್ಲಿ ನಟ ದರ್ಶನ್ ಅವರನ್ನು, ಬೆಂಗಳೂರಿನಲ್ಲಿ ಪವಿತ್ರಾ ಗೌಡ ಹಾಗೂ ದರ್ಶನ್​ ಸಹಚರರನ್ನು ಬಂಧಿಸಲಾಯ್ತು. ಇದೀಗ ಆರೋಪಿಗಳೆಲ್ಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ಪೈಕಿ ಮೂವರು ಆರೋಪಿಗಳನ್ನು ಮಾತ್ರ ತುಮಕೂರು ಜೈಲಿನಲ್ಲಿ ಇರಿಸಲಾಗಿದೆ.


Share It

You cannot copy content of this page