ಬೆಂಗಳೂರು: ಸರಕಾರಿ ನೌಕರರು ತಮ್ಮ ವರ್ಗಾವಣೆ ಮತ್ತು ಇನ್ನಿತರ ಸೇವಾ ವಿಚಾರಗಳಲ್ಲಿ ರಾಜಕೀಯ ಪ್ರಭಾವ ಬಳಸಕೂಡದು ಎಂದು ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿರುವ ಸಿಎಂ, ವರ್ಗಾವಣೆ ವಿಚಾರದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಮನವಿ ಮಾಡದೆ, ನೇರವಾಗಿ ಸಚಿವರಿಗೆ ಅನೇಕ ನೌಕರರು ಮನವಿ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದಿದ್ದಾರೆ.
ವರ್ಗಾವಣೆ ಸೇರಿ ಯಾವುದೇ ಸೇವಾ ವಿಚಾರಗಳನ್ನು ಆಯಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಟ್ಟದಲ್ಲಿ ಮನವಿ ಸಲ್ಲಿಸಬೇಕು. ಇಲ್ಲಿ ಯಾವುದೇ ಕಾರಣಕ್ಕೂ ಸಚಿವರನ್ನಾಗಲೀ, ಮುಖ್ಯಮಂತ್ರಿ ಕಚೇರಿಗಾಗಲೀ ಮನವಿ ಸಲ್ಲಿಸಬಾರದು. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಯ ಸಿಬ್ಬಂದಿಗೆ ಸೂಚನೆ ನೀಡಬೇಕು ಎಂದು ಮುಖ್ಯಕಾರ್ಯದರ್ಶಿ ಅವರಿಗೆ ಸೂಚಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ 1956 ಮತ್ತು 1980 ರ ಸರಕಾರಿ ಆದೇಶಗಳನ್ನು ಸಿಎಂ ಸಿದ್ದರಾಮಯ್ಯ ಉಲ್ಲೇಖ ಮಾಡಿದ್ದಾರೆ. ನಿಯಮ ಮೀರಿ ವರ್ಗಾವಣೆಗೆ ಮನವಿ ಮಾಡಿದರೆ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆಯೂ ಮುಖ್ಯಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ.

