ಅಪರಾಧ ಸುದ್ದಿ

ಐಟಿ ಅಧಿಕಾರಿಗಳ ಸೋಗಿನಲ್ಲಿ ಕಳದಳತನ ಯತ್ನ: ಇಬ್ಬರು ಆರೋಪಿಗಳ ಬಂಧನ

Share It


ಉಡುಪಿ: ಸಿನಿಮಾ ಶೈಲಿಯಲ್ಲಿ ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಲು ಯತ್ನಿಸಿದ್ದ ತಂಡದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಮಣೂರಿನಲ್ಲಿ ಜುಲೈ 25ರಂದು ಕವಿತಾ ಎಂಬವರ ಮನೆಗೆ ಆಗಂತುಕರ ತಂಡ ಐಟಿ ಅಧಿಕಾರಿಗಳ ಸೋಗಿನಲ್ಲಿ ನುಗ್ಗಿತ್ತು. ಸ್ವಿಫ್ಟ್ ಮತ್ತು ಇನೋವಾ ಕಾರುಗಳಲ್ಲಿ ಬಂದ ಸುಮಾರು 6-8 ಜನ ಅಪರಿಚಿತರ ತಂಡ ದರೋಡೆಗೆ ವಿಫಲ ಯತ್ನ ನಡೆಸಿ ವಾಪಸ್ ಹಿಂದಿರುಗಿತ್ತು. ಇದಕ್ಕಾಗಿ ಮಹಾರಾಷ್ಟ್ರದಲ್ಲಿ ಕುಳಿತು ಸಂಚು ರೂಪಿಸಿದ್ದರು ಎಂದು ಹೇಳಲಾಗಿತ್ತು.

ಆರೋಪಿಗಳ ಪತ್ತೆಗೆ ಕೋಟ ಠಾಣಾ ಪಿ.ಎಸ್.ಐ ಗುರುನಾಥ ಬಿ ಹಾದಿಮನಿ ಹಾಗೂ ಸುಧಾಪ್ರಭು ಮತ್ತು ಹಿರಿಯಡ್ಕ ಠಾಣಾ ಪಿಎಸ್‌ಐ ಮಂಜುನಾಥ ಅವರನ್ನು ಒಳಗೊಂಡ ಪ್ರತ್ಯೇಕ 3 ತಂಡ ರಚಿಸಲಾಗಿತ್ತು. ತನಿಖೆಗಿಳಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಸಿಸಿ ಕ್ಯಾಮರಾದಲ್ಲಿ ಕಂಡುಬಂದ ಆರು ಜನರಲ್ಲಿ ಇಬ್ಬರು ಸೆರೆಯಾಗಿದ್ದು, ಉಳಿದವರ ಶೋಧ ಕಾರ್ಯ ಮುಂದುವರಿದಿದೆ. ಬಂಧಿತರನ್ನು ಚಿಕ್ಕಮಗಳೂರಿನ ಸಂತೋಷ್ ನಾಯಕ್ (45) ಮತ್ತು ಕಾಪು ಪೊಲಿಪು ನಿವಾಸಿ ದೇವರಾಜ್ ಸುಂದರ್ ಮೆಂಡನ್(46) ಎಂದು ಗುರುತಿಸಲಾಗಿದೆ‌.


Share It

You cannot copy content of this page