ಅಂಕಣ ರಾಜಕೀಯ

ರಾಜ್ಯ ರಾಜಕಾರಣದಲ್ಲಿ ಶುರುವಾಗಿದೆ ಹಾವು- ಏಣಿ ಆಟ: ಗೆಲ್ಲೋರ್ಯಾರು? ಸೋಲೋರ್ ಯಾರು?

Share It

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇದೀಗ ಹಾವು ಏಣಿ ಆಟ ಶುರುವಾಗಿದ್ದು, ಇದರಲ್ಲಿ ಗೆಲ್ಲೋರ್ಯಾರು? ಸೋಲೋರ್ಯಾರು ಎಂಬ ಚರ್ಚೆ ಇದೀಗ ನಿಗೂಢವಾಗಿದೆ.

ರಾಜ್ಯ ರಾಜಕಾರಣದ ಪ್ರಮುಖ ಲೀಡರ್ ಗಳನ್ನೆಲ್ಲ ತಮ್ಮಷ್ಟಕ್ಕೆ ತಾವಾಗಿಯೇ ರಾಜಕೀಯ ಅಂಕಣದಿಂದ ದೂರ ಸರಿಯುವಂತೆ ಮಾಡುವ ಹಾವು- ಏಣಿ ಆಟ ಈಗ ಶುರುವಾಗಿದೆ. ಅದರ ಭಾಗವಾಗಿಯೇ ರಾಜ್ಯದಲ್ಲಿ ಪಕ್ಷಾತೀತವಾಗಿ ಕೆಲ ಪ್ರಯತ್ನ ನಡೆಯುತ್ತಿದೆ

ಸಿದ್ದರಾಮಯ್ಯಗೆ ಮೂಡಾ ಹಗರಣದ ಉರುಳು, ವಾಲ್ಮೀಕಿ ನಿಗಮದ ಕುಣಿಕೆ, ಕುಮಾರಸ್ವಾಮಿಗೆ ಗಣಿ ಧೂಳಿನ ಖೆಡ್ಡಾ, ಯಡಿಯೂರಪ್ಪಗೆ ಫೋಕ್ಸೋ ಕಾಯ್ದೆಯ ಗುಮ್ಮ ಎಡಬಿಡದೆ ಕಾಡುತ್ತಿದೆ. ಡಿಕೆಶಿಗೆ ಇಡಿ, ಐಟಿ ಆಪತ್ತು ಯಾವಾಗ ಬೇಕಾದರು ಇಣುಕಬಹುದು. ಇದು ಪ್ರಸ್ತುತ ರಾಜ್ಯ ರಾಜಕಾರಣದ ಪರಿಸ್ಥಿತಿ.

ರಾಜ್ಯ ರಾಜಕಾರಣದಲ್ಲಿ ಪ್ರಮುಖವಾಗಿ ಮೂವರು ಮಾಸ್ ಲೀಡರ್ ಗಳು. ಅದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ. ಮಾಜಿ ಪ್ರಧಾನಿ ದೇವೇಗೌಡರಿಗೆ ವಯಸ್ಸಾಗಿದೆ. ರಾಜಕಾರಣ ಸಾಕೆನಿಸಿದೆ. ಅವರು ಮಾಡಬೇಕಿನಿಸಿದರೂ, ದೇಹ ಮತ್ತು ವಯಸ್ಸು ಒಪ್ಪುತ್ತಿಲ್ಲ. ಹೀಗಾಗಿ, ಅವರು ಸಕ್ರಿಯ ರಾಜಕಾರಣದಿಂದ ಸ್ವಲ್ಪವೇ ದೂರವಾಗಿದ್ದಾರೆ.

ಈ ನಡುವೆಯೂ ಅವರ ಕುಟುಂಬದಲ್ಲಾದ ಅವಾಂತರ ಅವರನ್ನು ಜರ್ಝರಿತರನ್ನಾಗಿಸಿದೆ. ಹೀಗಾಗಿ, ಅವರು ರಾಜಕಾರಣದಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ. ವಯೋಸಹಜ ಕಾಯಿಲೆಗಳು ಅವರನ್ನು ಹಿಂಬಾಲಿಸಿವೆ. ಹೀಗಾಗಿ, ದೇವೇಗೌಡರ ಪರ್ವ ಕರ್ನಾಟಕದ ರಾಜಕಾರಣದ ಪಾಲಿಗೆ ಮುಗಿದಂತೆಯೇ ಎನ್ನಬಹುದು.

ಇನ್ನು ಎರಡನೇ ಮಾಸ್ ಲೀಡರ್ ಬಿ.ಎಸ್. ಯಡಿಯೂರಪ್ಪ. ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನ ಬಿಜೆಪಿಯಲ್ಲೇ ನಡೆಯಿತು. ಆದರೆ ಪಟ್ಟುಬಿಡದೆ ಮಗನಿಗೆ ಪಟ್ಟ ಕಟ್ಟುವಲ್ಲಿ ಗೆದ್ದರು. ಹೀಗಾಗಿ, ಅವರಿಗೀಗ ಪಕ್ಷದಲ್ಲೇ ಹಿಂಡು ಹಿಂಡು ವೈರಿಗಳಿದ್ದಾರೆ. ಮಗನನ್ನು ಪಕ್ಷದಿಂದ ದೂರವಿಡುವ ಹುನ್ನಾರ ನಡೆಯುತ್ತಿದೆ. ಈ ನಡುವೆ ಅವರ ಕೊರಳಿಗೆ ಪೋಕ್ಸೋ ಹುರುಳು ಸುತ್ತಿಕೊಂಡಿದೆ.

ಕಾಂಗ್ರೆಸ್ ಸರಕಾರದ ಮೇಲೆ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಮುಗಿಬೀಳುತ್ತಿದ್ದಂತೆ ಪೋಕ್ಸೋ ಪ್ರಕರಣ ಹೀವ ತಳೆದು, ಬಿಎಸ್ ವೈ ಅರೆಸ್ಟ್ ಆಗುವ ಹಂತಕ್ಕೆ ಹೋಗುತ್ತದೆ. ಕೊನೆ ಕ್ಷಣದಲ್ಲಿ ಜಾಮೀನು ರೂಪದಲ್ಲಿ ಅವರು ಪಾರಾಗುತ್ತಾರೆ. ಇನ್ಯಾವಾಗ ಅವರ ಬಂಧನ ಎಂಬುದು ಮಾತ್ರ ನಿಗೂಢ.

ಸಿದ್ದರಾಮಯ್ಯ ಅವರನ್ನು ಮೂಡಾ ಹಗರಣ ಕಾಡುತ್ತಿದೆ. ವಾಲ್ಮೀಕಿ ನಿಗಮದ ಅಕ್ರಮದ ವಾಸನೆ ಸಿದ್ದವರೆಗೆ ಬರುವ ಸಾಧ್ಯತೆ ಇದೆ. 40 ವರ್ಷದ ಸಮಾಜವಾದಿ ಸಿದ್ಧಾಂತದ ರಾಜಕಾರಣಕ್ಕೆ ಕಪ್ಪು ಹಚ್ಚುವ ಕೆಲಸ ನಡೆದಿದೆ. ಇದನ್ನು ಮಾಡಿದ್ದು ವಿರೋಧಿಗಳೋ, ಬಡಂಬಲಿಗರೋ ಎಂಬುದಷ್ಟೇ ಇದೀಗ ಕುತೂಹಲ. ಆದರೆ, ಅವರ ಆರ್ಭಟದ ರಾಜಕಾರಣಕ್ಕೂ ಅಂತ್ಯ ಹಾಡುವ ಕಾಲ ಬಂದಿದೆ.

ದೇವೇಗೌಡರ ನಂತರ ನಾಡಿನ ಜನಪ್ರಿಯ ಲೀಡರ್ ಕುಮಾರಸ್ವಾಮಿ. ಅವರೀಗ ಕೇಂದ್ರ ಸಚಿವ. ಎರಡು ಸ್ಥಾನ ಗೆದ್ದರೂ ಕೇಂದ್ರದಲ್ಲೊಂದು ಪ್ರಬಲ ಖಾತೆ. ಅವರನ್ನು ಲೋಕಾಯುಕ್ತದ ಮೂಲಕ ಖೆಡ್ಡಾಗೆ ಕೆಡವುವುದು ಸರಕಾರದ ಯತ್ನ. ಇದು ನಡೆದರೆ, ಕುಮಾರಸ್ವಾಮಿ ಯುಗಾಂತ್ಯ ಎನ್ನಬಹುದು.

ಇನ್ನು ಕುಮಾರಸ್ವಾಮಿ ಟಾರ್ಗೆಟ್ ಡಿಕೆ ಶಿವಕುಮಾರ್. ಅವರ ಮೇಲೆ ಕುಮಾರಸ್ವಾಮಿ ಕಣ್ಣು ಮಾತ್ರವಲ್ಲ, ಇಡಿ, ಸಿಬಿಐ, ಐಟಿ ಇಲಾಖೆಗಳ ಕಣ್ಣು ನೆಟ್ಟಿದೆ. ಇತ್ತೀಚೆಗೆ ಲೋಕಾಯುಕ್ತವೂ ಅವರನ್ನು ಕೆಣಕುತ್ತಿದೆ. ರಾಜಕೀಯ ಬದಲಾವಣೆ ಡಿಕೆಶಿ ಭವಿಷ್ಯವನ್ನು ಕೂಡ ಬದಲಿಸಿದರೆ ಅಚ್ಚರಿಯಲ್ಲ ಎನ್ನಬಹುದು.

ಯಾರ ಕಾಲು ಯಾರ ಕೈಲಿ: ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೊಡಲಿ ಎಂಬುದು ಡಿಕೆಶಿ ಒಳಬೇಗುದಿ. ಹಗರಣದಲ್ಲಿ ಸಿಲುಕಿದರೆ, ಇಳಿಸುವುದು‌ಸುಲಭ ಎಂಬುದು ಲೋಕಾರೂಢಿ. ಹೀಗಾಗಿ, ಸಿದ್ದರಾಮಯ್ಯ ಕಾಲೆಳೆಯುವ ತೆರೆಮರೆಯ ಪ್ರಯತ್ನ ನಡೆದರೂ ಅದು ಸಹಜ. ಆದರೆ, ಹಾಗಂತ ಡಿಕೆಶಿ ಸಿಎಂ ಆದರೆ, ಬಿಜೆಪಿ ಬಿಡುತ್ತಾ?

ಕೇಂದ್ರದ ಐಟಿ, ಇಡಿ, ಸಿಬಿಐ ಇಲಾಖೆಗಳು ಡಿ.ಕೆ.ಶಿವಕುಮಾರ್ ಬೆನ್ನುಬಿದ್ದಿವೆ. ಸಿದ್ದರಾಮಯ್ಯ ಬೆಂಬಲ ನಿಲ್ಲುತ್ತಿದ್ದಂತೆ ಡಿಕೆಶಿಗೆ ಗಾಳ ಹಾಕುತ್ತವೆ. ಇದರಲ್ಲಿ ಬಂಧನವಾದರೂ ಆಗಬಹುದು. ಅಲ್ಲಿಗೆ ಡಿಕೆಶಿ ಆಸೆಯೂ ಪೂರ್ತಿಯಾಗುವ ಸಾಧ್ಯತೆ ಕಡಿಮೆ.

ಡಿಕೆಶಿ ಮೇಲೆ ಎಚ್ ಡಿ ಕ ಕಣ್ಣು ನೆಟ್ಟಿದೆ. ಚನ್ನಪಟ್ಟಣಕ್ಕೆ ಬರುವುದು ಒಂದು ಸಿಟ್ಟಾದರೆ, ಒಕ್ಕಲಿಗ ಸಮುದಾಯಕ್ಕೆ ದೇವೆಗೌಡ ಕುಟುಂಬಕ್ಕೆ ಪರ್ಯಾಯ ನಾಯಕ ಎಂಬುದನ್ನು ಒಪ್ಪಲು ಸಿದ್ಧರಿಲ್ಲ. ಹೀಗಾಗಿ, ಡಿಕೆಶಿಗೆ ಕುಮಾರಸ್ವಾಮಿ ಗುಂಡಿ ತೋಡುತ್ತಾರೆ. ಆಗ ಸಹಜವಾಗಿಯಶೆ ಡಿಕೆಶಿ ಭವಿಷ್ಯ ಡೋಲಾಯಮಾನ.

ಎಚ್ಡಿಕೆ ಮೇಲೆ ಮತ್ತೇ ಇದೇ ಸಿಟ್ಟಿಗೆ ಡಿಕೆಶಿ ಕಣ್ಣು. ಅದು ಇದೀಗ ಸಿದ್ದರಾಮಯ್ಯ ಅವರಿಗೂ ವ್ಯಾಪಿಸಿದ್ದು, ಲೋಕಾಯುಕ್ತ ಪ್ರಕರಣ ಚುರುಕಾಗಿದೆ. ಆ‌ ಪ್ರಕರಣದಲ್ಲಿ ಎಚ್ ಡಿಕೆ ಬಂಧಿಸಿದರೆ, ಎಚ್ಡಿಕೆ ಭವಿಷ್ಯ ಮತ್ತು ಡಿಕೆಶಿ, ಸಿದ್ದರಾಮಯ್ಯ ವರ್ಚಸ್ಸು ಮಣ್ಣುಪಾಲು

ಇನ್ನೂ ಸರಕಾರಕ್ಕೆ ಅಗುತ್ತಿರುವ ಮುಜುಗರ ತಪ್ಪಿಸಲು ಬಿಜೆಪಿಯ ಮುಖಂಡರು ಟಾರ್ಗೆಟ್. ಇದರ ಮೊದಲ ಬಲಿಪಶು ಡಿ.ಎಸ್. ವೀರಯ್ಯ. ಜೊಲ್ಲೆ, ನಿರಾಣಿ ಇದೀಗ ಲೀಸ್ಟ್ ನಲ್ಲಿದ್ದಾರೆ. ಸಧ್ಯಕ್ಕೆ ಭಯ ಹುಟ್ಟಿಸುವ ಸ್ಥಿತಿಯಿರುವುದು ಬಿಎಸ್ ವೈ ಪ್ರಕರಣಕ್ಕೆ. ಪೋಕ್ಸೋ ಕಾಯ್ದೆಯಡಿ ಅವರ ಬಂಧನ ಸುಲಭ. ಆ ಮೂಲಕ ಬಿಜೆಪಿಗೆ ಭಯ ತರಿಸುವ ತವಕ ಸರಕಾರಕ್ಕೆ.

ಆದರೆ, ಬಿಎಸ್ ವೈ, ಎಚ್ ಡಿಕೆ ಇಬ್ಬರಲ್ಲಿ ಯಾರನ್ನೇ ಆಗಲೀ ರಾಜ್ಯ ಸರಕಾರ ಮುಟ್ಟಿದರೆ, ಕೇಂದ್ರ ತನಿಖಾ ಸಂಸ್ಥೆಗಳ ಕೈ ಸಿದ್ದರಾಮಯ್ಯ ಮತ್ತು ಡಿಕೆಶಿ ಕೊರಳಪಟ್ಟಿಗೆ ಬರುತ್ತದೆ. ಸಿದ್ದರಾಮಯ್ಯ ಕಾಲೆಳೆದು ಡಿಕೆಶಿ ಅಧಿಕಾರ ಪಡೆದರೆ, ಅವರ ಕಾಲೆಳೆಯಲು ಸಿದ್ದರಾಮಯ್ಯ ಬೆಂಬಲಿಗರ ಪಡೆಯೇ ಇದೆ.

ಹೀಗೆ ರಾಜ್ಯ ರಾಜಕಾರಣದಲ್ಲಿ ಒಬ್ಬರ ಕೈ ಮತ್ತೊಬ್ಬರ ಕೊರಳ ಪಟ್ಟಿಯಲ್ಲಿದೆ. ಇಲ್ಲಿ ಯಾರು ಬಿದ್ದರೂ, ಮತ್ತೊಬ್ಬರನ್ನು ಕೆಡವಿಯೇ ತೀರುತ್ತಾರೆ. ಇದಕ್ಕೆ ಪಕ್ಷದ ಹಂಗಿಲ್ಲ. ಎಲ್ಲ ಪಕ್ಷದಲ್ಲೂ ಎಲ್ಲರನ್ನೂ ಕಾಲೆಳೆಯುವ ಸ್ಥಿತಿಯಿದೆ. ಇದು ಎರಡನೇ ಹಂತದ ನಾಯಕತ್ವದ ಬೆಳವಣಿಗೆಗೆ ಕಾರಣವಾಗುತ್ತಾದರೂ, ಮೊದಲ ಹಂತದ ನಾಯಕತ್ವಕ್ಕೆ ಕೆಟ್ಟ ಬೀಳ್ಕೊಡುಗೆ ಸಲ್ಲದು.

ಹಾಗಂತ ಈ‌ ಎಲ್ಲ ನಾಯಕರು ಮಾಡಿದ್ದೆಲ್ಲ ಸರಿಯಲ್ಲ. ತಪ್ಪು ಮಾಡಿದವರು ಅನುಭವಿಸಬೇಕು. ಆದರೆ, ತಮ್ಮ ತಪ್ಪುಗಳಿಗಿಂತ ಬೇರೆಯವರ ತಪ್ಪಿನ ಮೇಲೆ ಅಧಿಕಾರದ ಆಸೆಗೆ ಬಿದ್ದು, ಮತ್ಯಾರದ್ದೋ ಒತ್ತಡದಲ್ಲಿ ಮೇರು ನಾಯಕರ ಮೇಲೆ ಮುಗಿಬಿದ್ದು ಕರ್ನಾಟಕದ ರಾಜಕಾರಣಕ್ಕೆ ಕಳಙಕ ತರುವುದು ಸರಿಯಲ್ಲ. ದ್ವೇಷ ರಾಜಕಾರಣ ಬಿಟ್ಟು, ಅಭಿವೃದ್ಧಿ ರಾಜಕಾರಣದ ಕಡೆಗೆ ಎಲ್ಲರ ಮನಸ್ಸುಗಳು ತುಡಿದರೆ ಒಳ್ಳೆಯದು.


Share It

You cannot copy content of this page