ಪರ್ಯಾಯ ಸಿಎಂ ಆಗಲು ರೆಡಿಯಾಗಿರಿ ಡಾ. ಜಿ.ಪರಮೇಶ್ವರ್ !
ಹೈಕಮಾಂಡ್ ನಿಂದ ಗೃಹ ಸಚಿವರಿಗೆ ಗೌಪ್ಯ ಸೂಚನೆ !
ದೆಹಲಿಯಲ್ಲಿ ನಡೆಯುತ್ತಿದೆ ಪರ್ಯಾಯ ಸಿಎಂ ಆಯ್ಕೆ ಕಸರತ್ತು
ಹೊಸದಿಲ್ಲಿ: ಕಾಂಗ್ರೆಸ್ ಹೈಕಮಾಂಡ್ ಇದೀಗ ಕರ್ನಾಟಕದ ರಾಜಕೀಯ ಬಿಕ್ಕಟ್ಟು ಬಗ್ಗೆ ಬಹಳ ಗಂಭೀರವಾಗಿ ಸಮಾಲೋಚನೆಗೆ ಮುಂದಾಗಿದೆ.
ಇಂದು ಬೆಳಗ್ಗೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಜತೆಗೆ ಗಂಭೀರವಾಗಿ ಸಮಾಲೋಚನೆ ನಡೆಸಿದ್ದಾರೆ.
ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ಮುಡಾ ಸೈಟ್ ಹಗರಣದಲ್ಲಿ ಸಿಲುಕಿ ರಾಜ್ಯಪಾಲರಿಂದ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ ಆದೇಶದ ವಿರುದ್ಧ ಹೈಕೋರ್ಟ್ ನಲ್ಲಿ ಕಾನೂನು ಸಮರ ನಡೆಸುತ್ತಿದ್ದರೂ ಆಗಸ್ಟ್ 29 ರಂದು ನಡೆಯಲಿರುವ ಹೈಕೋರ್ಟ್ ವಿಚಾರಣೆಯಲ್ಲಿ ಹಿನ್ನಡೆ ಅನುಭವಿಸಿದರೆ ಮುಂದೇನು? ಎಂಬ ಬಗ್ಗೆ ಪ್ಲ್ಯಾನ್-ಬಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಮುಂದಾಲೋಚನೆ ನಡೆದಿದೆ.
ಒಂದು ವೇಳೆ ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ಅವರ ಅರ್ಜಿ ವಜಾಗೊಳಿಸಿ ರಾಜ್ಯಪಾಲರ ಪ್ರಾಸಿಕ್ಯೂಶನ್ ನಿರ್ಧಾರ ಸರಿ ಎಂದು ತೀರ್ಪು ನೀಡಿದರೆ ಆಗ ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಗುತ್ತದೆ. ಆಗ ಸುಪ್ರೀಂ, ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ ಬೇಗನೆ ಸಿಎಂ ಸಿದ್ದರಾಮಯ್ಯ ಅವರ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸದಿದ್ದರೆ ರಾಜ್ಯಪಾಲ ಗೆಹ್ಲೋಟ್ ಅವರ ಕೈಮೇಲಾಗುತ್ತದೆ.
ಹೀಗಾಗಿ, ಅನಿವಾರ್ಯವಾಗಿ ಪರ್ಯಾಯ ಸಿಎಂ ಆಯ್ಕೆ ಈಗಲೇ ಮಾಡಲೇಬೇಕಿದೆ. ಏಕೆಂದರೆ ಪಕ್ಷಕ್ಕೆ ಕರ್ನಾಟಕದಲ್ಲಿ 135 ಶಾಸಕರ ಬೆಂಬಲ ಇದೆ. ಜತೆಗೆ ದೇಶದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಹೈಕಮಾಂಡ್ ವಯಸ್ಸಿನ ಕಾರಣಕ್ಕೆ ಬದಲಾಯಸಿ, ಹೊಸ ಪ್ರಧಾನಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಆಗ ಇಂಡಿಯಾ ಮೈತ್ರಿಕೂಟ ತನ್ನ 249 ಸಂಸದರ ಜೊತೆಗೆ ಬಹುಮತಕ್ಕೆ ಬೇಕಿರುವ 24 ಸಂಸದರನ್ನು ಹೇಗಾದರೂ ಮಾಡಿ ಎನ್.ಡಿ.ಎ ಮೈತ್ರಿಕೂಟದಿಂದ ಕರೆದುಕೊಂಡು ಬಂದರೆ ಸಾಕು, ಇಂಡಿಯಾ ಮೈತ್ರಿಕೂಟ ಹೊಸ ಪ್ರಧಾನಿ ಮಿಸಬಹುದು.
ಈಗ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಸೆಪ್ಟೆಂಬರ್ ತಿಂಗಳ 17 ರಂದು 74 ವರ್ಷ ಪೂರೈಸಿ 75ನೇ ವಯಸ್ಸಿಗೆ ಕಾಲಿಡುವ ಕಾರಣ ಬಿಜೆಪಿ ಹೈಕಮಾಂಡ್ ಈಗಾಗಲೇ ಹೊಸ ಪ್ರಧಾನಿ ನೇಮಿಸಲು ಮುಂದಾಗಿದೆ. ಆದರೆ ನರೇಂದ್ರ ಮೋದಿ ಅವರಿಗಿಂತ ಸರಿಸಾಟಿಯಾಗಿ ಬಿಜೆಪಿ ಯಾವುದೇ ನಾಯಕ ಪ್ರಧಾನಿ ಹುದ್ದೆ ಅಲಂಕರಿಸುವಷ್ಟು ಜನಪ್ರಿಯತೆ ಗಳಿಸಿಲ್ಲ.
ಇದರಿಂದ ನಾವು ನಿಸ್ಸಂಶಯವಾಗಿ ಇಂಡಿಯಾ ಮೈತ್ರಿಕೂಟದ ಪ್ರಧಾನಮಂತ್ರಿ ಅವಕಾಶ ಹೊಂದಿದ್ದೇವೆ. ನಮ್ಮ ಈ ಪ್ಲ್ಯಾನ್ ಗೆ ಅಮೆರಿಕದ ಪರೋಕ್ಷ ಬೆಂಬಲ ಇದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಇರುವ ಕಾರಣ ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ಜನಪ್ರಿಯತೆ ಕಳೆದುಕೊಂಡು ಸರ್ಕಾರದ ಮಟ್ಟದಲ್ಲೂ ಒಂದಿಷ್ಟು ಬೆಂಬಲ ಕಳೆದುಕೊಳ್ಳುವ ಸೂಚನೆ ಇದೆ. ಆದ್ದರಿಂದ ನಾನು ಕರ್ನಾಟಕದ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಅವಕಾಶ ಸಿಕ್ಕರೆ ಬೇಡ ಎನ್ನುತ್ತೇನೆ.
ಬದಲಿಗೆ ನಾವೆಲ್ಲರೂ ಸೇರಿ ಒಬ್ಬ ಪರ್ಯಾಯ ಸಿಎಂ ನೇಮಿಸಿ ಸಿದ್ದರಾಮಯ್ಯ ಅವರ ಜಾಗವನ್ನು ತುಂಬಲು ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹೇಳಿದ್ದಾರೆ. ಆಗ ಡಿ.ಕೆ.ಶಿವಕುಮಾರ್ ಸಿಎಂ ಆಗಲು ಪಕ್ಷದ 135 ಶಾಸಕರ ಬೆಂಬಲವನ್ನು ಶಾಸಕಾಂಗ ಸಭೆಯಲ್ಲಿ ತೋರಿಸಬೇಕು ಎಂದು ಖರ್ಗೆ ನೇರವಾಗಿ ಡಿ.ಕೆ.ಶಿ.ಗೆ ಸಿಎಂ ಪಟ್ಟ ಕಷ್ಟ ಎಂದು ಹೇಳಿ ಕಳುಹಿಸಿದ್ದಾರೆ.
ಇದಾದ ನಂತರ ಖರ್ಗೆ ಅವರು ಹೊರಗಿದ್ದ ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಆಗ ಪರಮೇಶ್ವರ್ ನಾನು ಸಿಎಂ ಆಗಲು ರೆಡಿ, ಆದರೆ ದಲಿತ ಸಿಎಂ ಎಂಬ ಹಣೆಪಟ್ಟಿ ಬೇಡ, ಏಕೆಂದರೆ ದಲಿತರ ಪರವಾಗಿ ಸಿಎಂ ಆಗಲು ಹಿರಿಯ ಸಚಿವ ಕೆ.ಎಚ್.ಮುನಿಯಪ್ಪ ಅವರು ದಲಿತರಲ್ಲೇ 2 ಬಣ ಮಾಡಲು ಮೊದಲಿನಿಂದಲೂ ಪ್ರಯತ್ನಿಸುತ್ತಿದ್ದಾರೆ. ಇಂತಹ ಪ್ರಯತ್ನ ಬಿಜೆಪಿಗೆ ವರದಾನ ಆಗಬಹುದು. ಆದ್ದರಿಂದ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದರೆ ನಾನು ಪರ್ಯಾಯ ಸಿಎಂ ಆಗಲು ಸಿದ್ಧ ಎಂದು ಖರ್ಗೆಗೆ ಪರಮೇಶ್ವರ್ ಉತ್ತರಿಸಿದ್ದಾರೆ.
ಹೀಗೆ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಬೆಳಗ್ಗೆ ಸತತವಾಗಿ 2 ಗಂಟೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದ ಪರ್ಯಾಯ ಸಿಎಂ ಆಯ್ಕೆ ಬಗ್ಗೆ ಗಹನವಾಗಿ ಸಮಾಲೋಚನೆ ನಡೆಸಿದ್ದಾರೆ.
ಸಿದ್ದರಾಮಯ್ಯರಿಂದ 2 ಪರ್ಯಾಯ ಸಿಎಂ ಅಭ್ಯರ್ಥಿಗಳು!: ಹೌದು, ಒಂದು ವೇಳೆ ಕಾನೂನು ಸಮರದಲ್ಲಿ ಏನಾದರೂ ಸೋಲಾದರೆ ತಕ್ಷಣವೇ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದಲ್ಲಿ ನೂತನ ಪರ್ಯಾಯ ಸಿಎಂ ನೇಮಿಸಬೇಕಾಗುತ್ತದೆ. ಆಗ ನಾವು ಒಗ್ಗಟ್ಟಿನಿಂದ ಇದ್ದು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಕೈಮೇಲಾಗದಂತೆ ನೋಡಿಕೊಳ್ಳಬೇಕು. ಇಷ್ಟಾದರೂ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಆಗ ಸಚಿವರಾದ ಕೆ.ಜೆ.ಜಾರ್ಜ್ ಅಥವಾ ಸತೀಶ್ ಜಾರಕಿಹೊಳಿ ಇಬ್ಬರಲ್ಲಿ ಒಬ್ಬರು ಪರ್ಯಾಯ ಸಿಎಂ ಆಗಲಿ ಎಂದು ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಗೆ ಸಂದೇಶ ರವಾನಿಸಿದ್ದಾರೆ.
ಈ ನಡುವೆ ಸಿದ್ದರಾಮಯ್ಯ ಬೆಂಬಲಿಗರಾದ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಗಾರ ಸಚಿವ ಎಂ.ಬಿ.ಪಾಟೀಲ್ ಅವರೂ ಕೂಡ ಪರ್ಯಾಯ ಸಿಎಂ ಆಗಲು ದೆಹಲಿ ಮಟ್ಟದಲ್ಲಿ ಲಾಬಿ ನಡೆಸಲು ಮುಂದಾಗಿದ್ದಾರೆ. ಜೊತೆಗೆ ಹಿರಿಯ ಸಚಿವ ಕೆ.ಎಚ್.ಮುನಿಯಪ್ಪ ಅವರು ದಲಿತ ವರ್ಗದಿಂದ ಸಿಎಂ ಆಗಲು ಲಾಬಿ ಆರಂಭಿಸಿದ್ದಾರೆ.
ಅಚ್ಚರಿ ಎಂಬಂತೆ ಅಲ್ಪಸಂಖ್ಯಾತ ವರ್ಗದಿಂದ ನಾನು ಸಿಎಂ ಆದರೆ ಸಿದ್ದರಾಮಯ್ಯ ಅವರ ಬೆಂಬಲ ಇದೆ ಎಂದು ಹೇಳಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಪರ್ಯಾಯ ಸಿಎಂ ಆಗಿ ಕರ್ನಾಟಕದ ಎಲ್ಲಾ ವರ್ಗಗಳನ್ನು ಒಗ್ಗೂಡಿಸಿ ದೇಶದ ಅಲ್ಪಸಂಖ್ಯಾತ ವರ್ಗದ ಮತಬ್ಯಾಂಕನ್ನು ಕಾಂಗ್ರೆಸ್ ಪಕ್ಷಕ್ಕೆ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಹೈಕಮಾಂಡ್ ಗೆ ಹೇಳಿ ಬೆಂಗಳೂರಿಗೆ ಬಂದಿದ್ದಾರೆ.
ಒಟ್ಟಾರೆ ಕರ್ನಾಟಕದ ಪರ್ಯಾಯ ಸಿಎಂ ಆಯ್ಕೆಗೆ ಕಾಂಗ್ರೆಸ್ ಹೈಕಮಾಂಡ್ ಇಂದು ಬಹಳ ಗಂಭೀರವಾಗಿ ರಹಸ್ಯವಾಗಿ ಆಂತರಿಕ ಸಮಾಲೋಚನೆ ನಡೆಸಲು ಶುರು ಮಾಡಿದೆ.