ಬೆಂಗಳೂರು: ಖಾಸಗಿ ದೂರಿನ ಅನ್ವಯ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿರುವ ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿ ಅವರಿಗೆ ದೂರು ನೀಡಲು ಕಾಂಗ್ರೆಸ್ ತೀರ್ಮಾನಿಸಿದೆ.
ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಖಾಸಗಿ ದೂರಿನ ಅನ್ವಯ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರು, ಆ ಮೂಲಕ ಕೇಂದ್ರ ಸರಕಾರವೇ 2021 ರಲ್ಲಿ ಹೊರಡಿಸಿರುವ ಸುತ್ತೋಲೆಯಲ್ಲಿನ ನಿಯಮ ಉಲ್ಲಂಘಿಸಿದ್ದಾರೆ ಎಂಬುದು ಕಾಂಗ್ರೆಸ್ ನಾಯಕರ ಆಗ್ರಹವಾಗಿದೆ.
ಇದೇ ವಿಷಯವನ್ನಿಟ್ಟುಕೊಂಡು ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಗೆ ದೂರು ನೀಡಲು ತೀರ್ಮಾನಿಸಲಾಗಿದೆ. ಕೇಂದ್ರ ಸರಕಾರದ ಕೈಗೊಂಬೆಯಂತೆ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ. ವಿಪಕ್ಷ ನಾಯಕರ ವಿರುದ್ಧ ತನಿಖಾ ಸಂಸ್ಥೆಗಳು ಅನುಮತಿ ಕೇಳಿದರೂ ಅನುಮತಿ ಕೊಡದಿರುವ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರಿಗೆ ಅನುಮತಿ ನೀಡಿದ್ದಾರೆ ಎಂಬುದನ್ನು ರಾಷ್ಟ್ರಪತಿ ಗೆ ಮನವರಿಕೆ ಮಾಡಿಕೊಡಲಿದ್ದಾರೆ.
ದೇಶದಲ್ಲಿ ರಾಜಭವನಗಳು ಬಿಜೆಪಿಯ ಕೇಂದ್ರಗಳಂತೆ ವರ್ತಿಸುತ್ತಿದ್ದು ಇದು ಪ್ರಜಾಪ್ರಭುತ್ವ ಕ್ಕೆ ಮಾರಕ ಎಂಬುದನ್ನು ರಾಷ್ಟ್ರಪತಿ ಗಳ ಮುಂದೆ ಮಂಡನೆ ಮಾಡುವುದು ಕಾಂಗ್ರೆಸ್ ನಾಯಕರ ತೀರ್ಮಾನವಾಗಿದೆ. ಬಿಜೆಪಿಯೇತರ ಮುಖ್ಯಮಂತ್ರಿಗಳ ವಿಚಾರಗಳಲ್ಲಿ ಕೇಂದ್ರ ಸರಕಾರ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಕೂಡ ಅವರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

