ಬೆಂಗಳೂರು: ಒಂದೇ ಮನೆಯಲ್ಲಿ ಪತಿಯೊಂದಿಗೆ ವಾಸಿಸುತ್ತಿದ್ದೇನೆ ಎಂದುಕೊಂಡು ಪ್ರತ್ಯೇಕ ಕೋಣೆಯಲ್ಲಿ ಮಲಗುವುದು ಪತಿಗೆ ನೀಡುವ ಮಾನಸಿಕ ಹಿಂಸೆಯೇ ಸರಿ ಎಂದು ಬಿಲಾಸ್ ಪುರ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಬೆಮೆತಾರಾ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಸಮರ್ಥನೆ ಮಾಡಿಕೊಂಡಿರುವ ವಿಭಾಗೀಯ ಪೀಠ, ಬಹಳ ವರ್ಷಗಳ ಕಾಲ ಮನೆಯಲ್ಲಿಯೇ ಇದ್ದರೂ ಬೇರೆ ಕೋಣೆಯಲ್ಲಿ ಮಲಗುತ್ತಿದ್ದ ಮಡದಿಯ ಮಾನಸಿಕ ಹಿಂಸೆಯಿಂದ ಮುಕ್ತಿ ಪತಿಗೆ ಕೊಡಿಸಿದೆ.
ಮದುವೆಯ ದಿನದಿಂದಲೂ ಗಂಡನೊಂದಿಗೆ ಜಗಳವಾಡಿಕೊಂಡು ಕಾಲ ಕಳೆದ ಮಹಿಳೆ, ತನ್ನ ಪತಿಯ ಮನೆಯಲ್ಲಿಯೇ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಜತೆಗೆ ಗಂಡನ ಬಗ್ಗೆ ಸುಖಾಸುಮ್ಮನೆ ಅನುಮಾನ ಪಡುತ್ತಿದ್ದರು. ಆದರೆ, ಕುಟುಂಬದ ಸಂಧಾನದ ನಡುವೆಯೂ ಜತೆಯಾಗಿ ಬಾಳಲು ಒಪ್ಪಲಿಲ್ಲ. ಹೀಗಾಗಿ, ಪತಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದರು.
ಪತಿಯ ಆರೋಪಗಳನ್ನು ನಿರಾಕರಿಸಿದ ಮಡದಿ, ಪತಿಯ ನಡವಳಿಕೆಯ ಬಗ್ಗೆಯೇ ಆರೋಪಿಸಿದರು. ಆದರೆ, ಅದನ್ನು ನಿರೂಪಿಸಲು ವಿಫಲವಾದರು. ಜತೆಗೆ, ಪತಿಯಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದರು. ಸಂಧಾನದ ನಡುವೆಯೂ ಇದು ಸರಿಹೊಂದುವ ಲಕ್ಷಣಗಳು ಕಾಣಿಸಲಿಲ್ಲ. ಹೀಗಾಗಿ, ನ್ಯಾಯಾಲಯದ ವಿಚ್ಚೇದನ ನೀಡಿತ್ತು.
ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಮಹಿಳೆಯ ಮನವಿಗೆ ಹೈಕೋರ್ಟ್ ಸಹ ಮಣೆ ಹಾಕಲಿಲ್ಲ. ಒಂದೇ ಸೂರಿನಡಿ ವಾಸಿಸುತ್ತಿದ್ದರೂ, ಯಾವುದೇ ಕಾರಣವಿಲ್ಲದೆ ಪ್ರತ್ಯೇಕ ಕೊಠಡಿಯಲ್ಲಿ ವಾಸಿಸುವುದು ಪತಿಗೆ ಮಾನಸಿಕ ಹಿಂಸೆಯೇ ಎಂದು ಅಭಿಪ್ರಾಯ ಪಟ್ಟಿತು.