ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಕೊಲೆ ಆರೋಪಿ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ನ್ಯಾಯಾಲಯ ಆದೇಶ ನೀಡಿದೆ.
ನಟ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗುತ್ತಿದ್ದ ಐಷಾರಾಮಿ ಸೌಲಭ್ಯಗಳ ಕುರಿತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು 24 ನೇ ಎಸಿಎಂಎಂ ನ್ಯಾಯಾಲಯದಲ್ಲಿ ದರ್ಶನ್ ಸ್ಥಳಾಂತರದ ಕುರಿತು ಮನವಿ ಮಾಡಿದ್ದರು.
ಪೊಲೀಸರ ಮನವಿಗೆ ಸ್ಪಂದಿಸಿದ ನ್ಯಾಯಾಲಯ ದರ್ಶನ್ ಸೇರಿದ ಡಿ ಗ್ಯಾಂಗ್ ಆರೋಪಿಗಳನ್ನು ವಿವಿಧ ಜೈಲಿಗೆ ಸ್ಥಳಾಂತರ ಮಾಡಲು ಅನುಮತಿ ನೀಡಿದೆ. ನಟ ದರ್ಶನ್ ಅವರನ್ನು ಬಳ್ಳಾರಿಯ ಸೆಂಟ್ರಲ್ ಜೈಲಿಗೆ ಸ್ಥಳಾಂತರ ಮಾಡಲು ಆದೇಶ ಮಾಡಲಾಗಿದೆ.
ಉಳಿದಂತೆ ಬೆಳಗಾವಿಯ ಜೈಲಿಗೆ ಪ್ರದೋಷ್, ಮೈಸೂರು ಜೈಲಿಗೆ ರಾಘವೇಂದ್ರ, ಪವನ್, ನಂದೀಶ್, ಶಿವಮೊಗ್ಗ ಜೈಲಿಗೆ ಜಗದೀಶ್, ಧಾರವಾಡ ಜೈಲಿಗೆ ಧನಂಜಯ,ವಿಜಯಪುರ ಜೈಲಿಗೆ ನಾಗರಾಜ್ ನನ್ನು ಸ್ಥಳಾಂತರ ಮಾಡಲು ಆದೇಶ ನೀಡಲಾಗಿದೆ.
ಈಗಾಗಲೇ ರವಿ, ಕಾರ್ತಿಕ್, ನಿಖಿಲ್ ಹಾಗೂ ಕೇಶವಮೂರ್ತಿಯನ್ನು ತುಮಕೂರು ಜೈಲಿನಲ್ಲಿ ಇರಿಸಲಾಗಿದೆ. ಉಳಿಸಂತೆ ಎ1 ಪವಿತ್ರಾ ಗೌಡ, ಅನುಕುಮಾರ್ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿಯೇ ಉಳಿಯಲಿದ್ದಾರೆ.
ಐತಿಹಾಸಿಕ ಸೆಂಟ್ರಲ್ ಜೈಲ್ ಗೆ ದರ್ಶನ್: 1884 ರಲ್ಲಿ ನಿರ್ಮಾಣವಾದ ಐತಿಹಾಸಿಕ ಸೆಂಟ್ರಲ್ ಜೈಲಿಗೆ ನಟ ದರ್ಶನ್ ಅವರನ್ನು ಸ್ಥಳಾಂತರ ಮಾಡಲಾಗುತ್ತದೆ. ಈ ಜೈಲಿನಲ್ಲಿ 385 ಖೈದಿಗಳಿದ್ದಾರೆ. ಅಲ್ಲಿ ಬಿಗಿಭದ್ರತೆಯೊಂದಿಗೆ ದರ್ಶನ್ ಅವರನ್ನು ಇರಿಸಲು ನ್ಯಾಯಾಲಯ ಆದೇಶ ನೀಡಿದೆ.