ಉಪಯುಕ್ತ ಸುದ್ದಿ

ಪಿಂಚಣಿದಾರರಿಗ ಗುಡ್ ನ್ಯೂಸ್ ನೀಡಿದ ಸರಕಾರ

Share It

ಬೆಂಗಳೂರು: 7 ನೇ ವೇತನ ಆಯೋಗದ ವರದಿ ಜಾರಿಗೊಳಿಸಿ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದ ರಾಜ್ಯ ಸರ್ಕಾರ, ಈಗ ನಿವೃತ್ತಿ ವೇತನ ಹೆಚ್ಚಳ ಮಾಡಿ ಪಿಂಚಣಿದಾರರಿಗೂ ಗುಡ್ ನ್ಯೂಸ್ ಕೊಟ್ಟಿದೆ.

ರಾಜ್ಯ ಸರ್ಕಾರದ ನಿವೃತ್ತ ನೌಕರರ ಪಿಂಚಣಿಯನ್ನು ಪರಿಷ್ಕರಣೆ ಮಾಡಿ ಆರ್ಥಿಕ ಇಲಾಖೆ ಬುಧವಾರ ಆದೇಶ ಹೊರಡಿಸಿದೆ. ಹೊಸ ಆದೇಶದ ಪ್ರಕಾರ ನಿವೃತ್ತ ಸರ್ಕಾರಿ ನೌಕರರ ಕನಿಷ್ಠ ಪಿಂಚಣಿಯನ್ನು 8,500 ರೂಪಾಯಿಗಳಿಂದ 13,500 ರೂಪಾಯಿಗಳಿಗೆ ಹೆಚ್ಚಳ ಮಾಡಲಾಗಿದೆ. ಇನ್ನು ಮುಂದೆ ಪಿಂಚಣಿಗೆ ಅರ್ಹರಾದ ನಿವೃತ್ತ ರಾಜ್ಯ ಸರ್ಕಾರಿ ನೌಕರರ ಕನಿಷ್ಠ ಪೆನ್ಶನ್‌ನಲ್ಲಿ 5 ಸಾವಿರ ರೂಪಾಯಿ ಏರಿಕೆಯಾಗಲಿದೆ.

ಕನಿಷ್ಠ ಪಿಂಚಣಿ ಜೊತೆಗೆ ರಾಜ್ಯ ಸರ್ಕಾರವು ಗರಿಷ್ಠ ಪಿಂಚಣಿಗೂ ಮಿತಿಯನ್ನ ನಿಗದಿಪಡಿಸಿದೆ. ಯಾವುದೇ ನಿವೃತ್ತ ರಾಜ್ಯ ಸರ್ಕಾರಿ ನೌಕರರ ಪಿಂಚಣಿಯು 1 ಲಕ್ಷದ 20 ಸಾವಿರದ 600 ರೂ.ಗಳಿಗೆ ಮೀರುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇಲ್ಲಿಯ ತನಕ ಗರಿಷ್ಠ ನಿವೃತ್ತಿ ವೇತನ ೭೫,೩೦೦ ರೂ.ಗಳಾಗಿತ್ತು. ಗರಿಷ್ಠ ಮಿತಿಯಲ್ಲಿ 45,300 ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ.

ರಾಜ್ಯ ಸರ್ಕಾರಿ ನೌಕರರ ಅವಲಂಬಿತರ ಕುಟುಂಬದವರ ಪಿಂಚಣಿಯನ್ನೂ ಸಹ ಪರಿಷ್ಕರಣೆ ಮಾಡಲಾಗಿದೆ. ಕನಿಷ್ಠ ನಿವೃತ್ತಿ ವೇತನವನ್ನು 13,500 ರೂ.ಗಳಿಗೆ ನಿಗದಿಗೊಳಿಸಲಾಗಿದ್ದು, ಹಿಂದಿನ ಪಿಂಚಣಿಗಿAತ 5 ಸಾವಿರ ರೂಪಾಯಿ ಏರಿಸಲಾಗಿದೆ. ಹಾಗೆಯೇ ಗರಿಷ್ಠ ಪಿಂಚಣಿಗೂ ಮಿತಿ ನಿಗದಿಪಡಿಸಲಾಗಿದೆ. ಅವಲಂಬಿತರ ನಿವೃತ್ತಿ ವೇತನವು 80,400 ರೂಪಾಯಿ ಮೀರುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ ಕುಟುಂಬದ ಅವಲಂಬಿತರ ಗರಿಷ್ಠ ನಿವೃತ್ತಿ ವೇತನ 45,180 ರೂ.ಗಳಿದ್ದು 35,220 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ರಾಜ್ಯ ಸರ್ಕಾರಕ್ಕೆ 7 ನೇ ವೇತನ ಆಯೋಗವು ಶಿಫಾರಸು ಮಾಡಿದಂತೆ ನಿವೃತ್ತ ಸರ್ಕಾರಿ ನೌಕರರ ಪಿಂಚಣಿ ಪರಿಷ್ಕರಣೆ ಮಾಡಿದೆ. ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಹೆಚ್ಚಳವು 2022ರ ಜುಲೈ 1 ರಿಂದ ಜಾರಿಗೆ ಬರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪಿಂಚಣಿ ಪರಿಷ್ಕರಣೆಯ ಆರ್ಥಿಕ ಲಾಭವು ಈ ವರ್ಷದ ಆಗಸ್ಟ್ 1 ರಿಂದ ಅನ್ವಯವಾಗುತ್ತದೆ ಎಂದು ಹಣಕಾಸು ಇಲಾಖೆ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ.


Share It

You cannot copy content of this page