ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಗೆ ಶನಿವಾರದವರೆಗೆ ಹೈಕೋರ್ಟ್ ರಿಲೀಫ್ !
ಬೆಂಗಳೂರು : ಮೈಸೂರಿನ ಮುಡಾ ಸೈಟ್ ಹಗರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಆಗಸ್ಟ್ 31 ಶನಿವಾರ ಬೆಳಗ್ಗೆ 10:30 ಕ್ಕೆ ಮುಂದೂಡಿದೆ.
ಮಧ್ಯಾಹ್ನ 2:30 ರಿಂದ ಪುನಾರಂಭವಾದ ಹೈಕೋರ್ಟ್ ವಿಚಾರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.
ಜನಾದೇಶದ ಮೇರೆಗೆ ಆಯ್ಕೆಯಾದ ಮುಖ್ಯಮಂತ್ರಿ ವಿರುದ್ಧ ಟಿ.ಜೆ.ಅಬ್ರಹಾಂ ಅವರ ಖಾಸಗಿ ದೂರನ್ನು ಪರಿಗಣಿಸಿ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಬಹುದು, ಆದರೆ ಉಳಿದ ಎರಡು ಖಾಸಗಿ ದೂರುಗಳನ್ನು ಸ್ವೀಕರಿಸದೆ ಪ್ರಾಸಿಕ್ಯೂಶನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ, ಆದ್ದರಿಂದ ರಾಜ್ಯಪಾಲರ ನಿರ್ಧಾರ ಸಂವಿಧಾನ ಬದ್ಧವಾಗಿಲ್ಲ ಎಂದು ವಾದ ಮಂಡಿಸಿದರು.
ಇದಕ್ಕೆ ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ಮೆಹ್ತಾ ಅವರು ಪ್ರತಿವಾದ ಮಂಡಿಸಿದರು.
ಅಂತಿಮವಾಗಿ ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಿಚಾರಣೆಯನ್ನು ಇದೇ ಶನಿವಾರ ಬೆಳಗ್ಗೆ 10:30 ಕ್ಕೆ ಮುಂದೂಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇನ್ನೆರಡು ದಿನ ತಾತ್ಕಾಲಿಕ ರಿಲೀಫ್ ಸಿಕ್ಕರೂ ಶನಿವಾರ ವಿಚಾರಣೆಯಲ್ಲಿ ಯಾರ ಕೈಮೇಲಾಗಲಿದೆ ಎಂದು ಈಗಲೇ ಅಂದಾಜಿಸುವುದು ಅಸಾಧ್ಯ.


