ಬೆಂಗಳೂರು : ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ ವಿರುಧ್ದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದ ರಾಜ್ಯಸರ್ಕಾರದ ನಿರ್ಧಾಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಹೈಕೋಟ್‌ನ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಕೆ.ಸೋಮಶೇಖರ್ ಹಾಗು ಉಮೇಶ್ ಎಂ.ಅಡಿಗ ಅವರು ಕಾಯ್ದಿರಿಸಿದ್ದ ತೀರ್ಪು ಅನ್ನು ಪ್ರಕಟಿಸಿದೆ.
ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಬಿ.ಎಸ್ ಯಡಿಯೂರಪ್ಪ ಅವರ ಅಧಿಕಾರದ ಅವಧಿಯಲ್ಲಿ ಸಿಬಿಐ ತನಿಖೆಗೆ ನೀಡಿದ ಅನುಮತಿಯನ್ನು ಹಿಂಪಡೆಯಲಾಗಿತ್ತು. ಇದನ್ನು ಪ್ರಶ್ನಿಸಿ ಕಳೆದ ಜನವರಿ 5ರಂದು ಹೈಕೋರ್ಟ್‌ಗೆ ರಿಟ್ ಪಿಟೀಷನ್ ಸಲ್ಲಿಸಿತ್ತು. ಅದರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಕರ್ನಾಟಕ ಲೋಕಾಯುಕ್ತ ಹಾಗು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.
2023ರ ನವೆಂಬರ್ 28 ರಂದು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರ ಸರಿಯಲ್ಲ, ಈಗಾಗಲೇ ಸಿಬಿಐ ಬಹುತೇಕ ತನಿಖೆ ಪೂರ್ಣಗೊಂಡಿದೆ. ಈ ಹಂತದಲ್ಲಿ ಅನುಮತಿ ಹಿಂಪಡೆಯಲಾಗಿದೆ ಎಂದು ಆಕ್ಷೇಪಿಸಿತ್ತು. ಇದಕ್ಕೆ ಪ್ರತಿಯಾಗಿ ಡಿಕೆಶಿ ಪರ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ ಹಿಂದಿನ ಸರ್ಕಾರ ರಾಜಕೀಯ ದ್ವೇಷದಿಂದ ಸಿಬಿಐ ತನಿಖೆಗೆ ನೀಡಿದೆ, ಇದಲ್ಲದೆ ಇಡಿ ತನಿಖೆಯೂ ನಡೆಯುತ್ತಿದೆ ಎಂದು ಪ್ರತಿಪಾದಿಸಿದರು.
ಈ ನಡುವೆ ರಾಜ್ಯಸರ್ಕಾರ ಸಿಬಿಐ ತನಿಖೆ ಬದಲಾಗಿ ಲೋಕಾಯುಕ್ತಕ್ಕೆ ಪ್ರಕರಣ ಹಸ್ತಾಂತರಿಸಲಾಗಿತ್ತು. ಇದು ಗೊಂದಲ ಮೂಡಿಸಿತ್ತು. ವಾದ -ಪ್ರತಿವಾದ ಆಲಿಸಿ ತೀರ್ಪನ್ನು ಕಾಯ್ಧಿರಿಸಿತ್ತು. ಇಂದು ವಿಭಾಗೀಯ ಪೀಠ ತೀರ್ಪು ಪ್ರಕಟಿಸಿ, ಸಂವಿಧಾನಕ್ಕೆ ಸಂಬಂಧಿಸಿದ ಈ ವಿಷಯದ ತೀರ್ಮಾನವನ್ನು ಸುಪ್ರಿಂ ಕೋರ್ಟ್‌ನಲ್ಲಿ ಕೈಗೊಳ್ಳಬೇಕು, ಇಲ್ಲಿ ಈ ಅರ್ಜಿ ಅಮಾನ್ಯ ಎಂದು ಹೇಳಿದೆ. ಸುಪ್ರೀಂ ಕೋರ್ಟ್ ನಲ್ಲಿ ಹೋಗಿ ಇದರ ಬಗ್ಗೆ ತೀರ್ಮಾನ ಕೈಗೊಳ್ಳಿ ಎಂದು ಹೈಕೋರ್ಟ್ ತಿಳಿಸಿದೆ.