ಸುದ್ದಿ

ಈಗಿನ ಸಮಾಜದಲ್ಲಿ ಮಹಿಳೆಯರು ಆರ್ಥಿಕ ಸಬಲರಾಗಬೇಕು, ಸದೃಢರಾಗಬೇಕು

Share It


ಹೊಳೆಹೊನ್ನೂರು: ಸಮಾಜದಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂಬ ಆಶಯದೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಲಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಾಲೂಕು ಯೋಜನಾಧಿಕಾರಿ ಅಜಯ್‍ಕುಮಾರ್ ಹೇಳಿದರು.
ಪಟ್ಟಣ ಸಮೀಪದ ಮಾರಶೆಟ್ಟಿಹಳ್ಳಿ ಗ್ರಾಮದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಸಾರ್ವಜನಿಕ ಸಮುದಾಯ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಹೊಲಿಗೆ ತರಬೇತಿಯ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಚ್ಚಿನ ಮಹಿಳೆಯರು ಮನೆಯಲ್ಲಿ ಸುಮ್ಮನೆ ಕಾಲಹರಣ ಮಾಡುತ್ತಾರೆ. ಅವರಿಗೆ ಸರಿಯಾದ ಮಾಹಿತಿ, ತರಬೇತಿ ಹಾಗೂ ಮಾರ್ಗದರ್ಶನ ಮಾಡಿದಲ್ಲಿ ಸ್ವಾವಲಂಬಿಗಳಾಗಿ ಜೀವನ ನಡೆಸಲು ಸಾಧ್ಯ ಆಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಅಡಿ ಅನೇಕ ಕಾರ್ಯಕ್ರಮ ನಡೆಸಲಾಗುತ್ತಿದೆ. ಅದರ ಸದುಪಯೋಗ ಪಡೆದುಕೊಂಡು ದುಡಿಮೆ ಮಾಡಿ ಹೆಚ್ಚು ಆದಾಯ ಗಳಿಸಿ ಅಭಿವೃದ್ಧಿ ಹೊಂದಬಹುದು ಎಂದರು.
ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಿರಣ್ ಮೋರೆ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೂಡ ಸರಕಾರಕ್ಕೆ ಸಮನಾಂತರವಾಗಿ ಪ್ರಗತಿ ಪರ ಕೆಲಸ ಮಾಡುತ್ತಿದೆ. ಇದರಿಂದ ಅನೇಕ ಕುಟುಂಬಗಳು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದರು.
ಸಿದ್ದೇಶ್ವರ ಸ್ವಾಮಿ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಮಮತಾ ಮಂಜುನಾಥ್ ಮಾತನಾಡಿದರು. ತರಬೇತಿ ಪಡೆದ ಆರತಿ ಹಾಗೂ ಅಂಬಿಕಾ ಅವರು ಅನುಭವ ಹಂಚಿಕೊಂಡರು. ಮಾರಶೆಟ್ಟಿಹಳ್ಳಿ ಒಕ್ಕೂಟದ ಅಧ್ಯಕ್ಷೆ ಅನಸೂಯಮ್ಮ ಅಧ್ಯಕ್ಷತೆ ವಹಿಸಿದ್ದರು.
ಇಟ್ಟಿಗೆಹಳ್ಳಿ ಒಕ್ಕೂಟದ ಅಧ್ಯಕ್ಷೆ ಶೋಭಾ, ತರಬೇತುದಾರರಾದ ರತ್ನಾ, ಸೇವಾ ಪ್ರತಿನಿಧಿ ಸುಜಾತ, ಶಿಬಿರಾರ್ಥಿಗಳು ಹಾಜರಿದ್ದರು.
ಈ ಸಂದರ್ಭ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ತರಬೇತುದಾರರಾದ ರತ್ನಾ ಅವರನ್ನು ಸನ್ಮಾನಿಸಲಾಯಿತು.
ಜ್ಯೋತಿ, ಮಂಜುಳಾ ಚೈತನ್ಯಾ ಪ್ರಾರ್ಥಿಸಿ, ವಲಯ ಮೇಲ್ವಿಚಾರಕ ಮಂಜುನಾಥ್ ಸ್ವಾಗತಿಸಿದರು. ಜ್ಞಾನವಿಕಾಸ ಕೇಂದ್ರದ ತಾಲ್ಲೂಕು ಸಮನ್ವಯಾಧಿಕಾರಿ ಎಂ.ಸೌಮ್ಯ ರೂಪಿಸಿ, ಅರುಂದತಿ ವಂದಿಸಿದರು.
ಫೋಟೊ ಫೈಲ್: 28ಎಚ್‍ಎಚ್‍ಆರ್1

ಹೊಳೆಹೊನ್ನೂರು ಸಮೀಪದ ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೊಲಿಗೆ ತರಬೇತಿಯ ಸಮಾರೋಪ ಕಾರ್ಯಕ್ರಮದಲ್ಲಿ ತರಬೇತಿ ಪಡೆದವರಿಗೆ ಮಾರಶೆಟ್ಟಿಹಳ್ಳಿ ಗ್ರಾ.ಪಂ. ಅಧ್ಯಕ್ಷ ಕಿರಣ್ ಮೋರೆ ಪ್ರಮಾಣಪತ್ರ ವಿತರಿಸಿದರು.


Share It

You cannot copy content of this page