ಎನ್‌ಡಿಎ ಅಸ್ತಿತ್ವಕ್ಕೆ ಜಾತಿ ಗಣತಿಯೇ ಮುಳುವು: ಇಂಡಿಯಾ ನಡೆಯ ಕಡೆಗೆ ಮೈತ್ರಿ ಪಕ್ಷಗಳ ಒಲವು
ಬೆಂಗಳೂರು: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮುನ್ನಡೆಯುತ್ತಿದ್ದು, ಜಾತಿ ಗಣತಿಯೇ ಸರಕಾರದ ಅಸ್ತಿತ್ವಕ್ಕೆ ಮುಳುವಾಗಲಿಯೇ?
ಹೀಗೊಂದು ಚರ್ಚೆ ಕೇಂದ್ರ ಸರಕಾರದಲ್ಲಿ ನಡೆಯುತ್ತಿದ್ದು, ಜಾತಿ ಗಣತಿಯ ವಿಚಾರದಲ್ಲಿ ಬಿಜೆಪಿ ಮತ್ತು ಪ್ರಮುಖ ಮಿತ್ರಪಕ್ಷಗಳ ಒಲವು ಬೇರೆಬೇರೆಯಾಗಿರುವುದು ಸರಕಾರದ ಆಯಸ್ಸು ಕಡಿಮೆ ಮಾಡುವ ಸಾಧ್ಯತೆಗಳನ್ನು ಸೃಷ್ಟಿಸಿದೆ.
ಮೈತ್ರಿಕೂಟದ ಭಾಗವಾಗಿರುವ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಜಾತಿ ಗಣತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಆಸಕ್ತಿ ವಹಿಸಿದೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದ್ದು, ಜಾತಿ ಗಣತಿ ಮೂಲಕ ಹಿಂದುಳಿದ ವರ್ಗಗಳ ಒಲವು ಗಳಿಸಲು ನಿತೀಶ್ ಕುಮಾರ್ ಯೋಜನೆ ರೂಪಿಸಿದ್ದಾರೆ.
ಈ ಹಿಂದಿನ ಬಿಹಾರ ಸರಕಾರದಲ್ಲಿ ಜಾತಿ ಗಣತಿಗೆ ಸಂಬಂಧಿಸಿ ಸರಕಾರ ಪ್ರಸ್ತಾವನೆ ಜಾರಿಗೆ ತಂದಿದೆ. ಇದೀಗ ಇಂಡಿಯಾ ಒಕ್ಕೂಟ ದೇಶಾದ್ಯಂತ ಜಾತಿ ಗಣತಿಗೆ ಒತ್ತಾಯಿಸುತ್ತಿದೆ. ಇದೀಗ ನಿತೀಶ್ ಕುಮಾರ್ ಕೂಡ ವಿಪಕ್ಷದ ಪ್ರಸ್ತಾವನೆ ಪರವಾಗಿರುವುದು ಬಿಜೆಪಿಗೆ ಬಹುದೊಡ್ಡ ಹಿನ್ನಡೆಯಾಗಲಿದೆ.
ಬಿಜೆಪಿ, ಎನ್ ಡಿಎ ಸರಕಾರದಲ್ಲಿ ಬಹುದೊಡ್ಡ ಬದಲಾವಣೆಯೊಂದನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಇದರಿಂದ ಬಿಜೆಪಿಗೆ ಬಹುದೊಡ್ಡ ಲಾಭವಾಗಲಿದೆ ಎಂಬುದು ಹೈಕಮಾಂಡ್ ಲೆಕ್ಕಾಚಾರ. ಆದರೆ, ಬಿಜೆಪಿಯ ಈ ಲಾಭಕ್ಕೆ ನಿತೀಶ್ ಕುಮಾರ್ ಮತ್ತು ಇನ್ನಿತರ ಮೈತ್ರಿ ಪಕ್ಷಗಳು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಸಂಸದೀಯ ಸಮಿತಿಯಲ್ಲಿ ‘ಇಂಡಿಯಾ’ ಪರ ಜೆಡಿಯು : ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ರೂಪಿಸಿರುವ ಸಂಸದೀಯ ಮಂಡಳಿಗೆ ಜೆಡಿಯು ಸೇರಿಕೊಂಡಿದೆ. ಗುರುವಾರ ನಡೆದ ಸಭೆಯಲ್ಲಿ ಕಾಂಗ್ರೆಸ್ ನ ಮಾಣಿಕ್ಯಂ ಟ್ಯಾಗೋರ್ ಜಾತಿ ಗಣತಿಯನ್ನು ಪ್ರಮುಖ ಅಜೆಂಡಾವಾಗಿ ಸೇರಿಸುವ ಪ್ರಸ್ತಾವ ಮಂಡಿಸಿದರು. ಇದಕ್ಕೆ ತೃಣಮೂಲ ಕಾಂಗ್ರೆಸ್, ಡಿಎಂಕೆ ಬೆಂಬಲ ಸೂಚಿಸಿದರೆ, ಜೆಡಿಯು ಸದಸ್ಯ ಗಿರ್ಧಾರಿ ಯಾದವ್ ಕೂಡ ಬೆಂಬಲಿಸುವ ಮೂಲಕ ಅಚ್ಚರಿ ಮೂಡಿಸಿದರು.


