ಅಸ್ಸಾಂನಲ್ಲಿ ಇನ್ಮುಂದೆ ಮುಸ್ಲಿಂ ಮದುವೆ ಮತ್ತು ವಿಚ್ಚೇದನದ ರಿಜಿಸ್ಟ್ರೇಷನ್ ಕಡ್ಡಾಯ
ಗುವಾಹಟಿ: ಮುಸ್ಲಿಂ ವೈಯಕ್ತಿಕ ಕಾನೂನಿಗೆ ವಿರುದ್ಧವಾಗಿ ಅಸ್ಸಾಂ ಸರಕಾರ ಹೆಜ್ಜೆಯನ್ನಿಟ್ಟಿದ್ದು, ಇನ್ನು ರಾಜ್ಯದಲ್ಲಿ ಮುಸ್ಲಿಂ ಮದುವೆ ಮತ್ತು ವಿಚ್ಚೇದನ ಗಳ ರಿಜಿಸ್ಟ್ರೇಷನ್ ಕಡ್ಡಾಯಗೊಳಿಸಲಾಗಿದೆ.
ಅಸ್ಸಾಂ ಸರಕಾರ ಮುಸ್ಲಿಂ ಮ್ರಾರೆಜ್ ಅಂಡ್ ಡೈವೋರ್ಸ್ ಬಿಲ್ ಅನ್ನು ಗುರುವಾರ ಮಂಡನೆ ಮಾಡಿದ್ದು, ಇನ್ನು ಮುಂದೆ ಇಸ್ಲಾಂ ವೈಯಕ್ತಿಕ ಕಾನೂನಿನಡಿ ನಡೆಯುವ ಮದುವೆ ಮತ್ತು ವಿಚ್ಚೇದನ ಗಳ ನೋಂದಣಿ ಕಡ್ಡಾಯಗೊಳಿಸಲಾಗಿದೆ ಎಂದು ಸಿಎಂ ಬಿಸ್ವಾಸ್ ಶರ್ಮಾ ತಿಳಿಸಿದ್ದಾರೆ.
ಮುಸ್ಲಿಂ ವಿವಾಹಗಳನ್ನು ಖಾಜಿಗಳ ಬಳಿ ನೋಂದಣಿ ಮಾಡಲಾಗುತ್ತಿದೆ. ಆದರೆ, ಸರಕಾರದ ಅಧಿಕೃತ ಇಲಾಖೆಯಲ್ಲಿ ನೋಂದಣಿ ಮಾಡುವುದು ಒಳ್ಳೆಯ ಬೆಳವಣಿಗೆ. ಹೀಗಾಗಿ, ವಿವಾಹ ಮತ್ತು ವಿಚ್ಚೇದನ ಕಡ್ಡಾಯ ಎಂದು ಸಿಎಂ ಹೇಳಿದ್ದಾರೆ.
ಮುಸ್ಲಿಂ ವಿವಾಹ ಹಾಗೂ ವಿಚ್ಚೇದನ ಕಾಯಿದೆ 1935 ಕ್ಕೆ ತಿದ್ದುಪಡಿ ತರುವ ಮೂಲಕ, ಮುಸ್ಲಿಂ ವಿವಾಹ ಮತ್ತು ವಿಚ್ಚೇದನ ಕಾಯಿದೆ- 2024 ಅನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಗಿದೆ. ಇದಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆಯನ್ನು ಪಡೆಯಲಾಗಿದೆ.
ಖಾಜಿಗಳ ಸಮ್ಮುಖದಲ್ಲಿ ನಡೆಯುವ ಮದುವೆಗಳು ಕಾನೂನುಬದ್ಧವಲ್ಲ, ಖಾಜಿಗಳು ಸರಕಾರಿ ಅಧಿಕಾರಿಗಳಲ್ಲ. ಹೀಗಾಗಿ, ಬಾಲ್ಯವಿವಾಹಗಳು ನಡೆಯುತ್ತಿವೆ. ಇದನ್ನು ತಪ್ಪಿಸುವ ಉದ್ದೇಶ ಸರಕಾರದ್ದಾಗಿದೆ. 2026 ರ ವೇಳೆಗೆ ಬಾಲ್ಯವಿವಾಹ ತಡೆಯುವುದು ನಮ್ಮ ಉದ್ದೇಶ ಎಂದು ಸಿಎಂ ತಿಳಿಸಿದ್ದಾರೆ.
ಇನ್ಮುಂದೆ ಮುಸ್ಲಿಂ ವಿವಾಹಗಳು ಸರಕಾರದ ಅಧಿಕೃತ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳ ಸಮ್ಮುಖದಲ್ಲಿ ನೋಂದಣಿ ಆಗಬೇಕು. ಸರಕಾರ ಅದಕ್ಕಾಗಿ ಅಧಿಕಾರಿಗಳ ನೇಮಕ ಮಾಡುವ ಸಿದ್ಧತೆ ನಡೆಸಿದೆ. ಕೇವಲ ಒಂದು ರುಪಾಯಿ ಶುಲ್ಕದಲ್ಲಿ ನೋಂದಣಿ ಮಾಡಿಸುವ ವಿಶೇಷ ಅವಕಾಶವನ್ನು ಕಲ್ಪಿಸಿದೆ ಎಂದು ಬಿಸ್ವಾಸ್ ಶರ್ಮಾ ತಿಳಿಸಿದ್ದಾರೆ.


