ಶಿವರಾಜು. ವೈ. ಪಿ, ಎಲೆರಾಂಪುರ
ಹರಾರೆ (ಜಿಂಬಾಂಬೆ) : ಭಾನುವಾರ ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಐದು ಟಿ 20 ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಬರೋಬ್ಬರಿ 100 ರನ್ ಗಳಿಂದ ಭರ್ಜರಿ ಜಯಗಳಿಸಿತು.
ಮೊದಲ ಪಂದ್ಯದಲ್ಲಿ ಜಿಂಬಾಂಬೆ ವಿರುದ್ಧ 13 ರನ್ ಗಳ ಅಂತರದಿಂದ ಸೋಲನ್ನು ಅನುಭವಿಸಿದ್ದ ಟೀಮ್ ಇಂಡಿಯಾಗೆ ತೀವ್ರ ಮುಖಭಂಗವಾಗಿತ್ತು. ನಂತರ ಎರಡನೇ ಪಂದ್ಯದಲ್ಲಿ ಅಕ್ಷರಶ: ಸಿಡಿದ್ದೆದ್ದ ಭಾರತದ ಕಲಿಗಳು ಮೊದಲ ಪಂದ್ಯದಲ್ಲಿ ಆದ ಅವಮಾನಕ್ಕೆ ತಕ್ಕ ಉತ್ತರ ನೀಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ ತನ್ನ ಹನ್ನೊಂದರ ಬಳಗದಲ್ಲಿ ಖಲೀಲ್ ಅಹಮದ್ ಬದಲಿಗೆ ಯುವ ಆಟಗಾರ ಸಾಯಿ ಸುದರ್ಶನ್ ಗೆ ಸ್ಥಾನ ನೀಡಿತ್ತು. ಬಳಿಕ ಆರಂಭಿಕ ಆಟಗಾರರಾಗಿ ನಾಯಕ್ ಶುಭ್ಮನ್ ಗಿಲ್ ಹಾಗೂ ಅಭಿಷೇಕ್ ಶರ್ಮ ಮೈದಾನಕ್ಕಿಳಿದರು. ಆರಂಭದಲ್ಲೇ ಗಿಲ್ ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕಿಡಾಯಿತು.
ನಂತರ ಕ್ರೀಸ್ ಕಚ್ಚಿ ನಿಂತ ಎಡಗೈ ದಾಂಡಿಗ ಅಭಿಷೇಕ್ ಶರ್ಮ 47 ಬಾಲ್ ಗಳಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್ ಸಹಿತ ಶತಕ ಸಿಡಿಸಿ ಮಿಂಚಿದರು. ಜೊತೆಯಲ್ಲೇ ನಿಂತ ರುತುರಾಜ್ ಗಾಯಕ್ವಡ್ 47 ಬಾಲ್ ಗಳಲ್ಲಿ 11 ಬೌಂಡರಿ ಒಂದು ಸಿಕ್ಸರ್ ಸಹಿತ 77 ರನ್ ಭಾರಿಸಿದರು. ಫಿನಿಷರ್ ಆಗಿ ಬಂದ ರಿಂಕು ಸಿಂಗ್ 22 ಬಾಲ್ ಗಳಲ್ಲಿ
2 ಬೌಂಡರಿ ಮತ್ತು 5 ಸಿಕ್ಸರ್ ಜೊತೆಗೆ 48 ರನ್ ಭಾರಿಸಿ ಲಯಕ್ಕೆ ಮರಳಿದರು.
ಇನ್ನೂ ಎರಡನೇ ಇನ್ನಿಂಗ್ಸ್ ಆರಂಭದ ಮೊದಲ ಓವರ್ ನಲ್ಲಿಯೇ ಮುಕೇಶ್ ಕುಮಾರ್ ಜಿಂಬಾಂಬೆಯ ಆರಂಭಿಕ ಆಟಗಾರನನ್ನು ಬೋಲ್ಡ್ ಮಾಡಿ ಆಘಾತ ನೀಡಿದರು. ಜಿಂಬಾಂಬೆಯ ಪರ ವೆಸ್ಸ್ಲಿ ಮದೇವೆರೆಯ 43 ರನ್ ಗಳ ಏಕಾಂಗಿ ಹೋರಾಟ ಬಿಟ್ಟರೆ ಇನ್ನು ಯಾವ ಆಟಗಾರರೂ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.
ಭಾರತದ ಪರ ಬೌಲ್ ಮಾಡಿದ ಮುಕೇಶ್ ಕುಮಾರ್ ಮತ್ತು ಆವೇಶ್ ಖಾನ್ ತಲಾ 3 ವಿಕೆಟ್ ಪಡೆದರು. ರವಿ ಬಿಷ್ನೋಯಿ 2 ಮತ್ತು ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದು, ಜಿಂಬಾಂಬೆಯನ್ನು 18.4 ಓವರ್ ಗಳಲ್ಲಿ 134 ರನ್ ಬಿಟ್ಟುಕೊಡುವ ಮೂಲಕ ಆಲ್ ಔಟ್ ಮಾಡಿ,100 ರನ್ ಗಳ ಅಂತರದಿಂದ ಜಯಗಳಿಸಿತು. ಟೀಮ್ ಇಂಡಿಯಾ ಈ ಪಂದ್ಯ ಗೆಲ್ಲುವ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-1 ರ ಅಂತ ಕಾಯ್ದುಕೊಂಡಿದೆ.