ಸುದ್ದಿ

ಮಹಿಳಾ ಪೀಡಕನಿಗೆ ಮಹಿಳೆಯರಿಂದಲೇ ಪಾಠ !

Share It

ಮಹಿಳಾ ಅಧಿಕಾರಿಗಳಿಂದಲೇ ಪ್ರಜ್ವಲ್ ಬಂಧನ,ವಿಚಾರಣೆ ಪ್ರಕ್ರಿಯೆ

ಸಂತ್ರಸ್ತ ಮಹಿಳೆಯರಿಗೆ “ಸ್ಟ್ರಾಂಗ್ ಮೆಸೇಜ್” ನೀಡಿದ ಎಸ್‌ಐಟಿ

ಬೆಂಗಳೂರು: ಮಹಿಳೆಯರ ದೌರ್ಜನ್ಯ ಮೆರೆದು, ತನ್ನ ವಿಕೃತಿ ಮೆರೆದಿದ್ದ ಪ್ರಜ್ವಲ್‌ಗೆ ಪಾಠ ಕಲಿಸಲು ಮತ್ತು ಅಸಹಾಯಕ ಮಹಿಳೆಯರಿಗೆ ಸ್ಟ್ರಾಂಗ್ ಮೆಸೇಜ್ ಕೊಡಲು ಎಸ್‌ಐಟಿ ಸರಿಯಾದ ಮಾರ್ಗ ಆಯ್ಕೆ ಮಾಡಿಕೊಂಡಿದೆ.

ಮಹಿಳೆಯರನ್ನು ಅಬಲೆಯರು ಎಂಬಂತೆ, ಅಸಹಾಯಕ ರೀತಿಯಲ್ಲಿ ಬಳಕೆ ಮಾಡಿಕೊಂಡಿದ್ದು, ಇದೆಲ್ಲದಕ್ಕು ತಕ್ಕ ಉತ್ತರ ನೀಡಬೇಕು. ಜತೆಗೆ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಹೆಣ್ಣು ಅಬಲೆಯಲ್ಲ ಎಂಬ ಸಂದೇಶ ಕೊಡಬೇಕು ಎಂಬ ನಿಟ್ಟಿನಲ್ಲಿ ಪ್ರಜ್ವಲ್ ಬಂಧನ ಪ್ರಕ್ರಿಯೆ ಮಹಿಳಾ ಅಧಿಕಾರಿಗಳ ಕಡೆಯಿಂದಲೇ ನಡೆದಿದೆ.

ಪ್ರಜ್ವಲ್ ರೇವಣ್ಣ ವಿದೇಶದಿಂದ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ, ಎಸ್‌ಐಟಿ ಮಹಿಳಾ ಪೊಲೀಸರ ತಂಡ ಆತನನ್ನು ವಶಕ್ಕೆ ಪಡೆಯಿತು. ಆತನನ್ನು ಕರೆತರುವ ಜೀಪ್‌ನಲ್ಲಿ 5 ಜನ ಮಹಿಳಾ ಅಧಿಕಾರಿಗಳು ಮಾತ್ರವೇ ಇದ್ದರು. ಡ್ರೈವರ್ ಹೊರತುಪಡಿಸಿ, ಪ್ರಜ್ವಲ್ ರೇವಣ್ಣನನ್ನು ಕರೆತಂದ ಜೀಪಿನಲ್ಲಿ ಎಲ್ಲ ಮಹಿಳಾ ಅಧಿಕಾರಿಗಳೇ ಇದ್ದರು.

ಸರಕಾರ ರಚನೆ ಮಾಡಿರುವ ಎಸ್‌ಐಟಿ ತಂಡದಲ್ಲಿರುವ ಸೀಮಾ ಲಾಟ್ಕರ್, ಡಿ.ಪೆನ್ನೇಕರ್, ಹಾಗೂ ಹಾಸನದ ಎಸ್‌ಪಿ ಸುಜೇತಾ ಸೇರಿ ಐವರು ಮಹಿಳಾ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಬಂಧನ ಪ್ರಕ್ರಿಯೆಯನ್ನು ನಡೆಸಿದರು. ಅವರನ್ನು ಜೀಪಿನಲ್ಲಿ ಕರೆತರುವ ಸಂದರ್ಭದಲ್ಲಿಯೂ ಇದೇ ಅಧಿಕಾರಿಗಳು ಮಾತ್ರವೇ ಇದ್ದರು.

ಆ ಮೂಲಕ ಎಸ್‌ಐಟಿ ಮಹಿಳೆಯರೆಂದರೆ, ಕೇವಲ ದೌರ್ಜನಕ್ಕೊಳಗಾಗುವ ವಸ್ತುಗಳಲ್ಲ. ಅದನ್ನು ಮಟ್ಟಹಾಕುವ ಶಕ್ತಿ ಕೂಡ ಎಂಬ ಸಂದೇಶ ಕೊಡುವ ಪ್ರಯತ್ನ ನಡೆಸಿದೆ. ನೊಂದಿರುವ ಮಹಿಳೆಯರು, ನಮಗೆ ನ್ಯಾಯ ಸಿಗುವುದಿಲ್ಲ ಎಂಬ ಭಾವನೆಯನ್ನೇ ವ್ಯಕ್ತಪಡಿಸಿದ್ದರು. ಇದಕ್ಕೆ ಎಸ್‌ಐಟಿ ಸಾಂಕೇತಿಕವಾಗಿ ಈ ಪ್ರಕ್ರಿಯೆ ನಡೆಸಿದೆ.

ಸಿಎಂ, ಗೃಹ ಸಚಿವರ ಜತೆ ಚರ್ಚೆ: ಪ್ರಜ್ವಲ್ ಬಂಧನಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಸಿಎಂ ಜತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಚರ್ಚೆ ನಡೆಸಿದ್ದರು. ಗೃಹಸಚಿವರು ಕೂಡ ಸಭೆಯಲ್ಲಿದ್ದು, ಆ ಸಭೆಯಲ್ಲಿಯೇ ಇಡೀ ಪ್ರಕ್ರಿಯೆಯನ್ನು ಮಹಿಳಾ ಪೊಲೀಸ್ ಅಧಿಕಾರಿಗಳ ಕಡೆಯಿಂದಲೇ ಮಾಡಿಸಿ, ನೊಂದಿರುವ ಮಹಿಳೆಯರಿಗೆ “ನಾವು ನಿಮ್ಮ ಪರವಾಗಿದ್ದೇವೆ” ಎಂಬ ಸಂದೇಶ ಕೊಡಬೇಕು ಎಂಬ ಅಂಶವನ್ನು ಬಿ.ಕೆ.ಸಿಂಗ್ ತಿಳಿಸಿದ್ದರು ಎನ್ನಲಾಗಿದೆ.

ನ್ಯಾಯಾಲಯಕ್ಕೆ ಕರೆತಂದಿದ್ದು ಮಹಿಳಾ ಅಧಿಕಾರಿಗಳೇ”: ಪ್ರಜ್ವಲ್ ಬಂಧನ ಮಾಡಿದ್ದು, ಮಾತ್ರವಲ್ಲ, ಆತನನ್ನು ಇಡೀ ರಾತ್ರಿ ಎಸ್‌ಐಟಿ ಕಚೇರಿಯಲ್ಲಿಟ್ಟುಕೊಂಡು, ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆಯಲ್ಲಿ ಕೂಡ ಮಹಿಳಾ ಅಧಿಕಾರಿಗಳೇ ಮುಂಚೂಣಿಯಲ್ಲಿದ್ದರು. ಪ್ರಜ್ವಲ್ ರೇವಣ್ಣ ಮಾಧ್ಯಮಗಳಿಂದ ದೂರ ಉಳಿಯುವ ಪ್ರಯತ್ನ ನಡೆಸಿ ಕ್ಯಾಮೆರಾ ಕಣ್ತಪ್ಪಿಸುವ ಪ್ರಯತ್ನ ನಡೆಸಿದರು. ಆದರೆ, ಅಧಿಕಾರಿಗಳು ಕ್ಯಾಮೆರಾ ಮುಂದೆ ಆತನನ್ನು ಫೋಕಸ್ ಮಾಡುವ ರೀತಿಯಲ್ಲಿಯೇ, ಆತನಿಗೆ ಮುಜುಗರವನ್ನುಂಟು ಮಾಡುತ್ತಲೇ ಆತನನ್ನು ನ್ಯಾಯಾಲಯಕ್ಕೆ ಕರೆದೊಯ್ಯುವ ಪ್ರಕ್ರಿಯೆ ನಡೆಸುವ ರೀತಿಯಲ್ಲಿ ನಡೆದುಕೊಂಡರು.


Share It

You cannot copy content of this page