ಪಠ್ಯದ ಜೊತೆಗೆ ಕೃತಿಗಳ ಓದುವ ಹವ್ಯಾಸದಿಂದ ಜ್ಞಾನದ ಖಜಾನೆ ತೆರೆದುಕೊಳ್ಳುತ್ತದೆ: ಕೆ.ವಿ.ಪ್ರಭಾಕರ್

1
Share It

ಪುಸ್ತಕಕ್ಕಿಂತ ಉತ್ತಮ ಗೆಳೆಯ ಇಲ್ಲ: ಮೊಬೈಲ್ ಗೀಳಿನಿಂದ ಹೊರಗೆ ಬನ್ನಿ: ವಿದ್ಯಾರ್ಥಿಗಳಿಗೆ ಕೆವಿಪಿ ಕರೆ

ಬೆಂಗಳೂರು ; ಪಠ್ಯದ ಜೊತೆಗೆ ಪಠ್ಯೇತರ ಕೃತಿಗಳ ಓದುವ ಅಭ್ಯಾಸ ಮತ್ತು ಹವ್ಯಾಸದಿಂದ ಜ್ಞಾನದ ಖಜಾನೆಯೇ ತೆರೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ಸ್ವಾಭಿಮಾನಿ ಕರ್ನಾಟಕ ವೇದಿಕೆ ಮತ್ತು ಶೇಷಾದ್ರಿಪುರಂ ಕಾಲೇಜಿನ ಕನ್ನಡ ವಿಭಾಗದ ಕನ್ನಡ ಸಂಘ ಜಂಟಿಯಾಗಿ ಆಯೋಜಿಸಿದ್ದ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಮತ್ತು ದತ್ತಿ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು.

ಪುಸ್ತಕಕ್ಕಿಂತ ಉತ್ತಮ ಗೆಳೆಯ ಇಲ್ಲ. ಕನ್ನಡದಲ್ಲಿ ಹೆಚ್ಚೆಚ್ಚು ಕೃತಿಗಳು, ನಾನಾ ಪ್ರಕಾರದ ಸಾಹಿತ್ಯಿಕ ಕೃತಿಗಳು ಹೆಚ್ಚೆಚ್ಚು ಪ್ರಕಟಗೊಳ್ಳುತ್ತಿರುವ ಸಂಭ್ರಮದ ಹೊತ್ತಲ್ಲೇ, ಓದುವ ಹವ್ಯಾಸ ನಿರೀಕ್ಷಿತ ಮಟ್ಟಕ್ಕೆ ವಿಸ್ತರಿಸುತ್ತಿಲ್ಲ ಎನ್ನುವುದು ಬೇಸರದ ಸಂಗತಿ. ವಿದ್ಯಾರ್ಥಿ ಸಮೂಹ ಓದುವ ಮೂಲಕ ತಮ್ಮ ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಬದಲಿಗೆ, ಮೊಬೈಲ್ ಗೀಳಿನಲ್ಲಿ ಮುಳುಗಿರುವುದು ಬೇಸರದ ಸಂಗತಿ. ಆದ್ದರಿಂದ ಮೊಬೈಲ್ ಗೀಳಿನಿಂದ ಹೊರಗೆ ಬನ್ನಿ ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ವಿದ್ಯಾರ್ಥಿಗಳಿಗೆ ಕೆ.ವಿ.ಪ್ರಭಾಕರ್ ಅವರು ಕರೆ ನೀಡಿದರು.

ಗುರುತಿಸಿದಾಗ ಸಾರ್ಥಕತೆ ಬರುತ್ತದೆ: ಯಾವುದೇ ಕಲೆ ಇರಲಿ, ಸಾಹಿತ್ಯವೇ ಇರಲಿ. ಕಲೆ-ಸಾಹಿತ್ಯವನ್ನು ಸಹೃದಯರು ಗುರುತಿಸಿದರೆ ಕಲಾವಿದರ, ಬರಹಗಾರರ ಶ್ರಮಕ್ಕೆ, ಆಸಕ್ತಿಗೆ, ಕಾಳಜಿಗೆ ಒಂದು ಸಾರ್ಥಕತೆ ಒದಗಿ ಬರುತ್ತದೆ. ಕನ್ನಡ ಸಾಹಿತ್ಯದ ಆರು ಪ್ರಕಾರಗಳನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಪ್ರಶಸ್ತಿ ಪುರಸ್ಕೃತರು ಹೆಚ್ಚೆಚ್ಚು ಸಾಹಿತ್ಯಿಕ ಕೃಷಿಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಲಿ ಎಂದು ಹಾರೈಸಿದರು.

ಲೇಖಕಿಯರ ಸಂಘದ ಅಧ್ಯಕ್ಷೆ ಹೆಚ್.ಎಲ್.ಪುಷ್ಪ, ಇಂದಿರಾ ಕೃಷ್ಣಪ್ಪ, ಡಾ.ಸಿ.ಸೋಮಶೇಖರ್, ದ್ವಾರನಕುಂಟೆ ಪಾತಣ್ಣ, ಎಂ.ಎಸ್.ಮಣಿ, ವೈ.ಬಿ.ಎಚ್.ಜಯದೇವ ಸೇರಿ ಹಲವು ಗಣ್ಯರು ಮತ್ತು ಪ್ರಶ್ತಸ್ತಿ ಪುರಸ್ಕೃತರಾದ ಲೇಖಕ, ಲೇಖಕಿಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


Share It

You cannot copy content of this page