ಪೀಣ್ಯ ದಾಸರಹಳ್ಳಿ:ಮರದ ಕೊಂಬೆಯೊಂದು ಮುರಿದುಬಿದ್ದ ಪರಿಣಾಮ ರಾಜಗೋಪಾಲ ನಗರ ಮುಖ್ಯರಸ್ತೆಯಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುವಂತಾಗಿತ್ತು.
ಪೀಣ್ಯ ಎರಡನೇ ಹಂತವನ್ನು ಸಂಪರ್ಕ ಕಲ್ಪಿಸುವ ರಾಜಗೋಪಾಲ ನಗರ ಮುಖ್ಯರಸ್ತೆಯಲ್ಲಿ ಸುಮಾರು ಮರದ ಕೊಂಬೆಗಳು ಒಣಗಿ ನಿಂತಿವೆ. ಮಳೆಯ ನಂತರ ಗಾಳಿಗೆ ಆಗಾಗ ಮುರಿದುಬೀಳುತ್ತಿದ್ದು, ಇಂದು ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಮರದ ಬೃಹದಾಕಾರದ ಕೊಂಬೆಯೊಂದು ಮುರಿದುಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿತ್ತು.
ಮರ ಮುರಿದುಬೀಳುವ ಸಮಯದಲ್ಲಿ ಲಾರಿಯೊಂದು, ಬಂದಿದ್ದು ಚಾಲಕನ ಸಮಯಪ್ರಜ್ಞೆಯಿಂದಾಗಿ ಅನಾಹುತವಾಗುವುದು ತಪ್ಪಿದೆ. ಮರದ ಕೊಂಬೆ ಮುರಿದುಬಿದ್ದ ಪರಿಣಾಮ ಸುಮಾರು ಒಂದೂವರೆ ಗಂಟೆಗಳ ಕಾಲ ವಾಹನ ಸವಾರರು ಟ್ರಾಫಿಕ್ನಲ್ಲಿ ಸಿಲುಕಿಕೊಳ್ಳಬೇಕಾಯಿತು.
ಸ್ಥಳೀಯರು ಬಿಬಿಎಂಪಿಗೆ ಕರೆ ಮಾಡಿ ಸುಮಾರು 1 ಗಂಟೆಯಾದರೂ, ಬಿಬಿಎಂಪಿ ಮರ ತೆರವುಗೊಳಿಸುವ ವಾಹನದ ಸುಳಿವಿರಲಿಲ್ಲ. ಒಂದೂವರೆ ಗಂಟೆಯ ನಂತರ ಆಗಮಿಸಿದ ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸಿ, ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅದೇ ರೀತಿ ರಸ್ತೆಯಲ್ಲಿರುವ ಬಹುತೇಕ ಮರಗಳು ಒಣಗಿದ್ದು, ಅವುಗಳನ್ನು ಬಿದ್ದಾಗ ಎಚ್ಚರವಾಗುವ ಬದಲು, ಮೊದಲೇ ತೆರವುಗೊಳಿಸಿ, ಮುಂದಾಗುವ ತೊಂದರೆಯನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
