ಬಳ್ಳಾರಿ/ಹೈದರಾಬಾದ್: ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಳ್ಳಾರಿಯ ಓರ್ವ ಯುವಕ ಹಾಗೂ ಹೈದರಾಬಾದ್ನ ಮಹಿಳೆ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ನಗರದ ಅಬ್ದುಲ್ ಸಲಾಮ್ (36) ಎಂಬಾತನನ್ನು ಆಂಧ್ರ ಪ್ರದೇಶ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ಈತ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಎಂದು ತಿಳಿದು ಬಂದಿದೆ. ಹೈದರಾಬಾದ್ಗೆ ತೆರಳಿದ್ದ ವಿಶೇಷ ಪೊಲೀಸರ ತಂಡ ಚಂಚಲಗುಡದಲ್ಲಿ ಸೈದಾ ಬೇಗಂ ಎಂಬಾಕೆಯನ್ನು ಬಂಧಿಸಿದ್ದು, ಮತ್ತೊಂದು ತಂಡ ಅಬ್ದುಲ್ ಸಲಾಂನನ್ನು ಬಂಧಿಸಿ ವಿಜಯವಾಡಕ್ಕೆ ಕರೆದೊಯ್ದಿದೆ.
ವಿಜಯವಾಡಕ್ಕೆ ಕರೆದೊಯ್ದ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳನ್ನು ಏಪ್ರಿಲ್ 6ರ ವರೆಗೆ ಪೊಲೀಸರ ವಶಕ್ಕೆ ನೀಡಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಪ್ರಕರಣದ ತನಿಖೆ ನಡೆಸುತ್ತಿದೆ. ವಿಜಯವಾಡ ಪೊಲೀಸರು ದಾಖಲಿಸಿರುವ ಪ್ರಕರಣದ ಆಧಾರದ ಮೇಲೆ ಮತ್ತೊಂದು ಪ್ರಕರಣ ದಾಖಲಿಸಿ ಎನ್ಐಎ ತನಿಖೆ ನಡೆಸಲಿದೆ ಎಂದು ವರದಿಯಾಗಿದೆ.
ಸಲಾಮ್ ಕುರಿತ ಖಚಿತ ಮಾಹಿತಿ ಆಧರಿಸಿ ಬಳ್ಳಾರಿಗೆ ಬಂದಿದ್ದ ಅಂಧ್ರ ಪೊಲೀಸರು, ಆತನನ್ನು ಹಿಂಬಾಲಿಸಿ, ನಗರದ ಧಾರದ ಮಿಲ್ ಬಳಿ ಬಂಧಿಸಿರುವುದು ಖಚಿತವಾಗಿದೆ. ಬಳಿಕ ಸ್ಥಳೀಯ ಕೌಲ್ ಬಜಾರ್ ಪೊಲೀಸ್ ಠಾಣೆಯ ಸಿಬ್ಬಂದಿಯ ನೆರವಿನೊಂದಿಗೆ ಸಲಾಮ್ ಮನೆಯಲ್ಲಿ ಪಂಚನಾಮೆ ನಡೆಸಿ, ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಆಂಧ್ರಕ್ಕೆ ಕರೆದೊಯ್ಯಲಾಗಿದೆ.

