ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಸರಣಿ ಅಪಘಾತ
ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ಫ್ಲೈ ಓವರ್ ಮೇಲೆ ಸರಣಿ ಅಪಘಾತ ನಡೆದಿದ್ದು, ಎಲಿವೇಟೆಡ್ ಅಧಿಕಾರಿ ಮಂಜುನಾಥ್ ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಪ್ಲೈ ಓವರ್ ಮೇಲೆ ತಡರಾತ್ರಿ ಕಾರೊಂದು ಕೆಟ್ಟು ನಿಂತಿತ್ತು. ಈ ಬಗ್ಗೆ ಕಾರಿನ ಮಾಲೀಕರು ಟೋಲ್ ಸಿಬ್ಬಂದಿಗೆ ದೂರು ನೀಡಿದ್ದರು. ಕಾರು ರಸ್ತೆಯಲ್ಲಿ ನಿಂತಿದ್ದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಯುಂಟಾಗಿತ್ತು. ಈ ಕಾರಣದಿಂದ ಕೆಟ್ಟುನಿಂತಿದ್ದ ಕಾರುವತೆರವುಗೊಳಿಸಲು ಟೋಲ್ ಸಿಬ್ಬಂದಿ ಬಂದಿದ್ದರು.
ಟೋಲ್ ಸಿಬ್ಬಂದಿ ಟೋಯಿಂಗ್ ವಾಹನದ ಜತೆ ಆಗಮಿಸಿ, ಕಾರನ್ನು ತೆರುವುಗೊಳಿಸುವ ಪ್ರಕ್ರಿಯೆ ನಡೆಸುತ್ತಿರುವಾಗಲೇ ಹಿಂದಿನಿಂದ ವೇಗವಾಗಿ ಟಾಟಾ ಏಸ್ ವಾಹನವೊಂದು ಟೋಯಿಂಗ್ ವಾಹನ ಮತ್ತು ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಮಂಜುನಾಥ್ ಎಂಬ ಟೋಲ್ ಅಧಿಕಾರಿ ಮೃತಪಟ್ಟಿದ್ದಾರೆ.
ಟಾಟಾ ಏಸ್ ಗುದ್ದಿದ್ದ ರಭಸಕ್ಕೆ ಮತ್ತಿಬ್ಬರು ಟೋಲ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಮೃತಪಟ್ಟ ಮಂಜುನಾಥ್ ತಮ್ಮ ಮಗಳ ಮದುವೆಯನ್ನು ಆಗಸ್ಟ್ 10 ನಡೆಸಲು ನಿಶ್ಚಯಿಸಿದ್ದರು. ಮಗಳ ಮದುವೆ ಖುಷಿಯಲ್ಲಿದ್ದ ಮಂಜುನಾಥ್ ಸಾವಿನಿಂದ ಅವರ ಕುಟುಂಬ ಕಂಗೆಟ್ಟಿದ್ದು, ಆಕ್ರಂದನ ಮುಗಿಲು ಮುಟ್ಟಿದೆ


